Big News : ಅಯ್ಯಪ್ಪ ಸ್ವಾಮಿಯನ್ನು ನೋಡಲು ಪುರುಷರಂತೆ ಮಹಿಳೆಯರಿಗೂ ಸಮಾನ ಹಕ್ಕಿದೆ ; ತೀರ್ಪು ಸ್ವಾಗತಾರ್ಹ ಎಂದ ಪ್ರತಿಭಾ ಕುಳಾಯಿ – ಕಹಳೆ ನ್ಯೂಸ್
ಮಂಗಳೂರು, ಸೆ29 : ಕೇರಳದ ಶಬರಿಮಲೆ ದೇವಸ್ಥಾನದ ಒಳಗೆ ಎಲ್ಲ ವಯೋಮಾನದ ಮಹಿಳೆಯರಿಗೂ ಮುಕ್ತ ಪ್ರವೇಶಕ್ಕೆ ಅನುಮತಿ ನೀಡುವಂತೆ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಆಧುನಿಕತೆಗೆ ಅಗತ್ಯವಾದ ತೀರ್ಪು ಹೊರಬಂದಿದೆ. ಈ ತೀರ್ಪು ಸ್ವಾಗತಾರ್ಹ ಎಂದು ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಹೇಳಿದ್ದಾರೆ.
ಪುರುಷರಂತೆ ಮಹಿಳೆಯರಿಗೂ ಪೂಜೆಯ ಸಮಾನ ಅವಕಾಶವಿದೆ. ಸಂಪ್ರದಾಯದ ಕಾರಣಕ್ಕೆ ಮಹಿಳೆಯರು ದೇವಾಲಯ ಪ್ರವೇಶಿಸುವುದನ್ನು ನಿಷೇಧಿಸುವುದು ಸರಿಯಲ್ಲ. ಮಹಿಳೆಯರಿಗೆ ಎಲ್ಲಾ ದೇವಾಲಯಕ್ಕೂ ಮುಕ್ತ ಪ್ರವೇಶ ಇರಬೇಕು. ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನಿರಾಕರಿಸುವುದು ಲಿಂಗ ಅಸಮಾನತೆಯಾಗುತ್ತದೆ. ಅಲ್ಲದೆ ಇಂತಹ ನಿಯಮಗಳಿಂದ ಹಿಂದೂ ಮಹಿಳೆಯರ ಧಾರ್ಮಿಕ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ತಿಳಿಸಿದರು.
ಮಂಗಳೂರಿನ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ಮಹಿಳೆಯರೂ ಪೂಜೆ ಮಾಡುತ್ತಾರೆ. ಅಲ್ಲಿ ಯಾವುದೇ ರೀತಿಯ ತಾರತಮ್ಯವಿಲ್ಲ. ಮಹಿಳೆಯರು ಮುಟ್ಟಾಗುತ್ತಾರೆ ಎಂಬ ಒಂದು ಕಾರಣಕ್ಕೇ ಪ್ರವೇಶ ನಿರಾಕರಿಸುವುದು ಎಷ್ಟು ಸರಿ…? ಮುಟ್ಟಿನ ಅವಧಿಯಲ್ಲಿ ಮಹಿಳೆಯರು ಸ್ವತಃ ತಾವೇ ದೇವಾಲಯಕ್ಕೆ ಬರುವುದಿಲ್ಲ. ದೇವರು ಯಾವುದೇ ನಿಯಮಗಳನ್ನು ಮಾಡಿಲ್ಲ. ಎಲ್ಲಾ ನಿಯಮಗಳನ್ನು ಜನರೇ ಮಾಡಿರುವಂತಹದು. ಹಾಗಾಗಿ ಮಹಿಳೆಯರು ದೇವಾಲಯ ಪ್ರವೇಶಿಸುವುದನ್ನು ನಿಷೇಧಿಸುವುದು ಸರಿಯಲ್ಲ. ದೇವರನ್ನು ನೋಡಲು ಎಲ್ಲರಿಗೂ ಸಮಾನ ಹಕ್ಕಿದೆ. ಶಬರಿಮಲೆ ಕ್ಷೇತ್ರಕ್ಕೆ ಮಹಿಳೆಯರು ಪ್ರವೇಶಿಸಬಾರದು ಎಂದು ದೇವರು ಎಲ್ಲೂ ಹೇಳಿಲ್ಲ ಎಂದವರು ಹೇಳಿದರು.
ದೇವರು ಕೊಟ್ಟ ಆಯುಷ್ಯ ಎಲ್ಲಿಯವರೆಗೆ ಎಂದು ನಮಗೆ ಗೊತ್ತಿಲ್ಲ. 50 ವರ್ಷದವರೆಗೆ ನಾವು ಬದುಕುತ್ತೇವೆ ಎಂಬ ಧೈರ್ಯ ಕೂಡ ನಮಗಿಲ್ಲ. 50 ವರುಷದ ನಂತರ ನಾವು ಅನಾರೋಗ್ಯಕ್ಕೆ ತುತ್ತಾಗಬಹುದು. ಹಾಗಾಗಿ ಇಂತಹ ಕಟ್ಟುಪಾಡುಗಳು ಸರಿಯಲ್ಲ ಎಂದು ಹೇಳಿದರು.
ಕೇರಳದ ಪವಿತ್ರ ಯಾತ್ರಾಸ್ಥಳ ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸಮ್ಮತಿ ಸೂಚಿಸಿ, ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಇದು ಕೋರ್ಟ್ ಕೊಟ್ಟಿರುವ ತೀರ್ಪು ಅಲ್ಲ. ಅಯ್ಯಪ್ಪ ಸ್ವಾಮಿಯೇ ಕೊಟ್ಟಿರುವ ತೀರ್ಪು. ನಾವು ಕಾನೂನು ಗೌರವಿಸೋಣ. ಎಲ್ಲವೂ ದೇವರ ಇಚ್ಛೆಯಂತೆ ನಡೆಯುತ್ತದೆ. ಮುಂದೆ ನಡೆಯಲಿರುವುದು ದೇವರ ಇಚ್ಛೆಯಂತೆ ನಡೆಯುತ್ತದೆ ಎಂದು ಹೇಳಿದ್ದಾರೆ.