ಪುತ್ತೂರು: ಭಯೋತ್ಪಾದನಾ ನೆಲೆಗಳ ಮೇಲಿನ ಭಾರತದ ಸರ್ಜಿಕಲ್ ಸ್ಟ್ರೈಕ್ ಅನ್ನುವುದು ಪ್ರಪಂಚದ ಸೇನಾ ಇತಿಹಾಸದಲ್ಲೇ ಅತ್ಯದ್ಭುತವಾದ ಸಂಗತಿ. ತದನಂತರದಲ್ಲಿ ಪ್ರಪಂಚದ ಸಮ್ಮುಖದಲ್ಲಿ ನಾವು ಇಂತಹ ದಾಳಿ ನಡೆಸಿದ್ದೇವೆ ಎಂದು ಘೋಷಿಸಿದ್ದು ಭಾರತದ ಧೈರ್ಯಕ್ಕೆ ಹಿಡಿದ ಕೈಗನ್ನಡಿ. ಹಾಗಾಗಿ ಸರ್ಜಿಕಲ್ ದಾಳಿಯ ಮುಖೇನ ಭಾರತ ತಾನು ಸೇನಾ ನೆಲೆಯಿಂದಲೂ, ರಾಜತಾಂತ್ರಿಕವಾಗಿಯೂ ಅತ್ಯಂತ ಸಮರ್ಥ ರಾಷ್ಟ್ರ ಎಂಬುದನ್ನು ವಿಶ್ವದ ಮುಂದೆ ಸಾಕ್ಷೀಕರಿಸಿ ತೋರಿದೆ ಎಂದು ನಿವೃತ್ತ ಸೇನಾಧಿಕಾರಿ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಶನಿವಾರ ಆಯೋಜಿಸಲಾದ ಸರ್ಜಿಕಲ್ ಸ್ಟ್ರೈಕ್ ದಿಣಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸರ್ಜಿಕಲ್ ದಾಳಿಯ ಪೂರ್ವದಲ್ಲಿ ಅಂತಹದ್ದೊಂದು ಸಾಹಸವನ್ನು ಭಾರತ ಮೆರೆಯಬೇಕಾದ ಸನ್ನಿವೇಶಗಳು ಸೃಷ್ಟಿಯಾಗಿದ್ದವು. ಉರಿ ಎಂಬ ಪ್ರದೇಶದಲ್ಲಿ ಹತ್ತೊಂಬತ್ತು ಸೈನಿಕರನ್ನು ಹತ್ಯೆ ಮಾಡಲಾಗಿದ್ದರೆ, ಅಲ್ಲಲ್ಲಿ ದಾಳಿಗಳು ನಡೆದು ಸೈನಿಕರ ಆತ್ಮಸ್ಥೈರ್ಯವೇ ಕುಸಿಯುವಂತಹ ಸಂದರ್ಭ ಬರಲಾರಂಭಿಸಿತ್ತು. ಭಾರತೀಯ ಸೈನ್ಯ ತಾನು ಸಮರ್ಥ ಎಂಬುದನ್ನು ಪ್ರಪಂಚಕ್ಕೆ ತೋರಿಸಿಕೊಡುವ ಅಗತ್ಯವೂ ಇತ್ತಲ್ಲದೆ ಭಯೋತ್ಪಾದಕರಿಗೆ, ಪಾಕಿಸ್ಥಾನಕ್ಕೆ ಪ್ರಖರ ಸಂದೇಶವನ್ನು ನೀಡುವ ಅಗತ್ಯವೂ ಇತ್ತು. ಈ ಎಲ್ಲ ಕಾರಣಗಳೂ ಒಂದಾಗಿ ಸರ್ಜಿಕಲ್ ಸ್ಟ್ರೈಕ್ ಯೋಜನೆ ಕಾರ್ಯಗತವಾಯಿತು ಎಂದರು.
ಅನ್ಯ ರಾಷ್ಟ್ರದ ಭೂಭಾಗದೊಳಗೆ ಹೋಗಿ ನಿರ್ದಿಷ್ಟ ಸ್ಥಳದಲ್ಲಿ ದಾಳಿ ಮಾಡಿಬರುವುದಕ್ಕೆ ಸಾಕಷ್ಟು ತಯಾರಿ ಹಾಗೂ ಗೌಪ್ಯತೆ ಎರಡೂ ಬೇಕು. ಅದರಲ್ಲೂ ಯಾವುದೇ ಪ್ರಾಣ ಹಾನಿಯಿಲ್ಲದೆ ಮರಳಿ ಬರುವುದೆಂದರೆ ಸುಲಭದ ಮಾತಲ್ಲ. ಸುಮಾರು ಐದು ಭಯೋತ್ಪಾದಕ ನೆಲೆಗಳನ್ನು ಗುರುತಿಸಿ ಅದರ ಮೇಲೆ ದಾಳಿ ನಡೆಸಿ ಅರವತ್ತರಿಂದ ಎಪ್ಪತ್ತು ಭಯೋತ್ಪಾದಕರನ್ನು ವಧಿಸಿ ನಮ್ಮ ಸೈನಿಕರು ಮರಳಿ ಬಂದಿರುವುದು ದೇಶದ ತಾಕತ್ತನ್ನು ಇಡಿಯ ಜಗತ್ತಿಗೆ ತೋರಿಸಿದೆ ಎಂದು ನುಡಿದರು.
ಪೋಕ್ರಾನ್ ಅಣುಬಾಂಬ್ ಪರೀಕ್ಷೆಯ ಸಂದರ್ಭದಲ್ಲಿ ಅಮೇರಿಕದಂತಹ ರಾಷ್ಟ್ರಗಳು ನಮ್ಮ ಮೇಲೆ ಆರ್ಥಿಕ ನಿರ್ಬಂಧ ಹೇರಿದ್ದವು. ಎಚ್ಚರಿಕೆ ನೀಡಿದ್ದವು. ಆದರೆ ಪೋಕ್ರಾನ್ ಘಟನೆಯ ಇಪ್ಪತ್ತು ವರ್ಷಗಳ ನಂತರ ಸರ್ಜಿಕಲ್ ದಾಳಿ ನಡೆಸಿದ್ದೇವೆ ಎಂದು ಭಾರತ ಘಂಟಾಘೋಷವಾಗಿ ಹೇಳಿಕೊಂಡಾಗ ಪಾಕಿಸ್ಥಾನದ ಆಪ್ತರಾಷ್ಟ್ರವಾದ ಚೀನಾವೂ ಸೊಲ್ಲೆತ್ತಿಲ್ಲ. ಅಮೇರಿಕದಂತಹ ಬಲಾಢ್ಯ ದೇಶಗಳು ಮೌನವಹಿಸಿವೆ. ಇದು ಭಾರತ ಪ್ರಾಪಂಚಿಕವಾಗಿ ಸದೃಢವಾಗಿ ಬೆಳೆದಿರುವುದನ್ನು ತೋರಿಸಿಕೊಡುತ್ತದೆ ಎಮದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ದೇಶ ವಿಭಜನೆಯ ಕಾಲದಿಂದ ಈಗಿನ ಕಾಲದ ವರೆಗೂ ಪಾಕಿಸ್ಥಾನ ತನ್ನ ದೂರ್ತ ಬುದ್ಧಿಯನ್ನು ಪ್ರದರ್ಶಿಸುತ್ತಲೇ ಬಂದಿದೆ. ಕಾರ್ಗಿಲ್ ಯುದ್ಧದಲ್ಲಿ ಸರಿಯಾದ ಪಾಠ ಕಲಿಸಿದ್ದರೂ ಮತ್ತೆ ಮತ್ತೆ ದಾಳಿ ಮಾಡುವ ಹುಂಬತನ ತೋರಿಸಿದೆ. ಭಯೋತ್ಪಾದನೆಯ ಮೂಲಕ್ಕೇ ಸರ್ಜಿಕಲ್ ದಾಳಿಯ ಮುಖಾಂತರ ಹೊಡೆದಿರುವುದು ಭಾರತದ ಯೋಗ್ಯತೆಯನ್ನು ಬಿಂಬಿಸಿದೆ ಮತ್ತು ಅಂತಹ ಅಗತ್ಯವೂ ಇತ್ತು ಎಂದು ನುಡಿದರು.
ಈ ಸಂದರ್ಭದಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಸನ್ಮಾನಿಸಲಾಯಿತು. ಸರ್ಜಿಕಲ್ ದಾಳಿಯ ಡಾಕ್ಯುಮೆಂಟರಿಯನ್ನು ಪ್ರದರ್ಶಿಸಲಾಯಿತು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಲ್ಲೊಬ್ಬರಾದ ಪ್ರೊ.ಕೆ.ಕೃಷ್ಣ ಕಾರಂತ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲಕ ಡಾ.ರೋಹಿಣಾಕ್ಷ ಶಿರ್ಲಾಲು ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಖಿತ್ ಕುಮಾರ್ ವಂದಿಸಿದರು. ವಿದ್ಯಾರ್ಥಿನಿ ಸಾಯಿಶ್ರಿ ಪದ್ಮ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾಥಿನಿಯರಿಂದ ದೇಶಭಕ್ತಿಗೀತೆ, ರಾಷ್ಟ್ರ ಗೀತೆ ಮೊಳಗಿತು.