‘ವಿಧಾನಸೌಧ’ದ ‘ಸಚಿವರ ಕಚೇರಿ’ಗಳಲ್ಲಿ ಸಿಬ್ಬಂದಿಗಳಿಲ್ಲದೆ ಖಾಲಿ, ಖಾಲಿ: ಜನರ ಸಮಸ್ಯೆಗಳಿಗಿಲ್ಲ ಪ್ರತ್ಯುತ್ತರ – ಕಹಳೆ ನ್ಯೂಸ್
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ( Karnataka Congress Government ) ಅಸ್ತಿತ್ವಕ್ಕೆ ಬಂದು ಎರಡು ತಿಂಗಳೆ ಕಳೆಯುತ್ತಿದೆ. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದಂತವರಿಗೆ ಖಾತೆಗಳನ್ನು ಕೂಡ ಹಂಚಿಕೆ ಮಾಡಲಾಗಿದೆ.
ಜಿಲ್ಲಾ ಉಸ್ತುವಾರಿಕೆಯನ್ನು ನೀಡಲಾಗಿದೆ. ಹೀಗಿದ್ದೂ ವಿಧಾನಸಧೌದಲ್ಲಿ ಮಾತ್ರ ಸಚಿವರ ಕಚೇರಿಗಳಲ್ಲಿ ಸಿಬ್ಬಂದಿಗಳಿಲ್ಲದೆ ಖಾಲಿ, ಖಾಲಿ ಹೊಡೆಯುತ್ತಿವೆ. ಜನರ ಸಮಸ್ಯೆಗಳಿಗೆ ಪ್ರತ್ಯುತ್ತರ ನೀಡದಷ್ಟು ಬಿಕೋ ಎನ್ನುತ್ತಿವೆ ಎನ್ನಲಾಗುತ್ತಿದೆ. ಅದು ಯಾಕೆ ಅಂತ ಮುಂದೆ ಓದಿ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ( Karnataka Assembly Election-2023) ಕಾಂಗ್ರೆಸ್ ಪಕ್ಷ ( Congress Party ) ಭರ್ಜರಿ ಬಹುಮತ ಪಡೆದು ಅಧಿಕಾರದ ಗದ್ದುಗೆಗೆ ಏರಿದೆ. ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ( CM Siddaramaiah ), ಉಪ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ( DCM DK Shivakumar ) ಆಡಳಿತದ ಚುಕ್ಕಾಣಿಯನ್ನು ಆರಂಭದಲ್ಲಿ ವಹಿಸಿಕೊಂಡಿದ್ದರು. ಅಲ್ಲದೇ ಇವರೊಂದಿಗೆ 8 ಮಂದಿ ಶಾಸಕರು ಸಚಿವರಾಗಿ ಪದಗ್ರಹಣ ಮಾಡಿದ್ದರು.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬರುತ್ತಿದ್ದಂತೆ ನಿಗಮ-ಮಂಡಳಿಗಳ ನಾಮನಿರ್ದೇಶನಗಳನ್ನು ರದ್ದುಪಡಿಸಿದ್ದರೇ, ಹಿಂದಿನ ಸರ್ಕಾರದ ಟೆಂಟರ್ ಪ್ರಕ್ರಿಯೆಗೂ ತಡೆ ನೀಡಿತ್ತು. ಇದಲ್ಲದೇ ವಿವಿಧ ಇಲಾಖೆಗಳಿಗೆ ಅನ್ಯನಿಯೋಜನೆಯ ಮೇಲೆ ನಿಯೋಜನೆಗೊಂಡಿದ್ದಂತ ಅಧಿಕಾರಿಗಳು, ಸಿಬ್ಬಂದಿಗಳ ನಿಯೋಜನೆಯನ್ನು ರದ್ದುಗೊಳಿಸಲಾಗಿತ್ತು. ಮಾತೃ ಇಲಾಖೆಗೆ ಮರಳುವಂತೆ ಸೂಚಿಸಿತ್ತು.
ಈಗ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತ್ರ, ಸಚಿವರ ಕಚೇರಿಗಳಿಗೆ ಅಗತ್ಯವಿರುವಂತ ಅಧಿಕಾರಿ, ಸಿಬ್ಬಂದಿಗಳನ್ನು ಅನ್ಯನಿಯೋಜನೆ ಮೇಲೆ ನೇಮಿಸಿಕೊಳ್ಳಬೇಕಿದ್ದು ಮಾತ್ರ ಮರೆತೇ ಹೋಗಿದೆ ಎನಿಸುತ್ತಿದೆ. ಹೀಗಾಗಿ ಸಚಿವರ ಕಚೇರಿಗಳಲ್ಲಿ ಸಿಬ್ಬಂದಿಗಳು ಇಲ್ಲದೆ ಖಾಲಿ, ಖಾಲಿ ಹೊಡೆಯುತ್ತಿದ್ದು, ಕಚೇರಿಗೆ ಬರುವಂತ ಜನರ ಸಮಸ್ಯೆಗಳಿಗೆ ಪ್ರತಿಸ್ಪಂದನೆ ಸಿಗದಂತೆ ಆಗಿದೆ ಎನ್ನಲಾಗುತ್ತಿದೆ.
ಇನ್ನೂ ಸಚಿವರ ಕಚೇರಿಯಲ್ಲಿರುವಂತ ಅಧಿಕಾರಿಗಳು, ಸಿಬ್ಬಂದಿಗಳಿಗೆ ಹೆಚ್ಚಿನ ಹೊರೆ ಕೂಡ ಬಿದ್ದಿದ್ದು, ಜನರೊಂದಿಗೆ ವ್ಯವಹರಿಸುವಂತ ರೀತಿಯಲ್ಲೂ ಬದಲಾವಣೆ ಕಂಡು ಬಂದಿದೆ ಎಂಬುದಾಗಿ ಅನೇಕ ಸಾರ್ವಜನಿಕರು ದೂರುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅನ್ಯ ಸೇವೆ ಮತ್ತು ನಿಯೋಜನೆಯ ಮೇಲೆ ಸಚಿವರ ಕಚೇರಿಗಳಿಗೆ ಅಗತ್ಯವಿರುವಂತ ಸಿಬ್ಬಂದಿಗಳನ್ನು ನಿಯೋಜಿಸಿ, ರಾಜ್ಯದ ಜನರು ಸಮಸ್ಯೆ ಹೇಳಿಕೊಂಡು ಬಂದಾಗ ಸೂಕ್ತ ಪ್ರತಿಸ್ಪಂದನೆ ಶಕ್ತಿ ಸೌಧದಲ್ಲಿ ಸಿಗುವಂತೆ ಆಗಲಿ.