ಎಂಎಸ್ ಪಿಸಿ ಕೇಂದ್ರಕ್ಕೆ ಹಠಾತ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್; ಅವ್ಯವಸ್ಥೆಗೆ ಕಿಡಿ : ಆಮೂಲಾಗ್ರ ಸುಧಾರಣೆಗೆ ಕ್ರಮ –ಕಹಳೆ ನ್ಯೂಸ್
ಬೆಳಗಾವಿ: ಬೆಳಗಾವಿಯ ಎಂಎಸ್ ಪಿಸಿ (ಮಹಿಳಾ ಸಪ್ಲಿಮೆಂಟರಿ ಪ್ರೊಡಕ್ಷನ್ ಸೆಂಟರ್) ಕೇಂದ್ರಕ್ಕೆ ಗುರುವಾರ ಹಠಾತ್ ಭೇಟಿ ನೀಡಿದ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಅಲ್ಲಿನ ಕಳಪೆ ಆಹಾರ ಮತ್ತು ಅವ್ಯವಸ್ಥೆ ಕಂಡು ಕಿಡಿಕಾರಿದ್ದಾರೆ.
ಅಂಗನವಾಡಿ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರ ಸರಬರಾಜು ಮಾಡುವ ಬೆಳಗಾವಿಯ ಹಲಗಾದಲ್ಲಿರುವ ಎಂಎಸ್ ಪಿಸಿ ಕೇಂದ್ರಕ್ಕೆ ಸಚಿವೆ ಹೆಬ್ಬಾಳಕರ್ ಹಠಾತ್ ಭೇಟಿ ನೀಡಿದರು. ಅಲ್ಲಿನ ಸ್ಥಿತಿಗತಿ ಕಂಡು ತೀವ್ರವಾಗಿ ನೊಂದುಕೊoಡ ಅವರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಸಚಿವರು ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಳಪೆ ಗುಣಮಟ್ಟದ ಆಹಾರ ಸಂಗ್ರಹಿಸಿರುವುದು ಕಂಡು ಬಂತು. ಇಡೀ ಆವರಣದಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ನೋಡಿ ದಂಗಾದರು. ಸಂಪೂರ್ಣ ಎಂಎಸ್ ಪಿಸಿ ಕೇಂದ್ರ ಅವ್ಯವಸ್ಥೆಯಿಂದ ಕೂಡಿತ್ತು. ಇದನ್ನೆಲ್ಲ ನೋಡಿದ ಅವರು, ಪೌಷ್ಠಿಕ ಆಹಾರ ಪೂರೈಸುವ ಸರಕಾರದ ಮೂಲ ಉದ್ದೇಶವೇ ಇಲ್ಲಿ ಬುಡಮೇಲಾಗಿದೆ ಎಂದು ನೋವು ತೋಡಿಕೊಂಡರು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
“ನಾನು ಈ ಇಲಾಖೆಯ ಸಚಿವೆಯಾಗಿ ಈ ವ್ಯವಸ್ಥೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ರಾಜ್ಯದ ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಪೌಷ್ಠಿಕ ಆಹಾರ ಸಿಗಬೇಕು. ಯೋಜನೆಯ ಉದ್ದೇಶ ಸಫಲವಾಗಬೇಕು. ಯಾರದ್ದೋ ನಿರ್ಲಕ್ಷ್ಯದಿಂದ ಇಡೀ ಯೋಜನೆ ವಿಫಲವಾಗಬಾರದು. ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಅನ್ಯಾಯವಾಗಬಾರದು. ಹಾಗಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಎಂಎಸ್ ಪಿಸಿ ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲಿಸುತ್ತೇನೆ. ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ವ್ಯವಸ್ಥೆಗೆ ಆಮೂಲಾಗ್ರ ಬದಲಾವಣೆ ತರಲು ಕ್ರಮ ಕೈಗೊಳ್ಳುತ್ತೇನೆ” ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.