ಪುತ್ತೂರು: ಸಂಶೋಧನೆ ಅನ್ನುವುದು ಕೇವಲ ಶಿಕ್ಷಣ ಕ್ಷೇತ್ರಕ್ಕಷ್ಟೇ ಸೀಮಿತವಾದ ವಿಷಯವಲ್ಲ. ಎಲ್ಲಾ ರಂಗಗಳಲ್ಲಿಯೂ, ಕ್ಷೇತ್ರಗಳಲ್ಲಿಯೂ ಸಂಶೋಧನೆಗಳ ಅಗತ್ಯತೆ ಇದೆ. ಅದರಲ್ಲೂ ವಾಣಿಜ್ಯೋದ್ಯಮಕ್ಕೆ ಸಂಬಂಧಪಟ್ಟಂತೆ ಸಂಶೋಧನೆಗಳಿಗೆ ಅನಂತ ಅವಕಾಶಗಳಿವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಡಾ.ಅಬೂಬಕ್ಕರ್ ಸಿದ್ದಿಕ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಬುಧವಾರ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮ ಸಂಶೋಧನಾ ಪ್ರಕ್ರಿಯೆ ಎಂಬ ವಿಷಯದ ಬಗೆಗೆ ಮಾತನಾಡಿದರು.
ಇಂದು ಉತ್ಪಾದನಾ ಕ್ಷೇತ್ರ, ಹಣಕಾಸು ಕ್ಷೇತ್ರ, ಮಾನವ ಸಂಪನ್ಮೂಲ ಹಾಗೂ ಮಾರಾಟ ಹೀಗೆ ನಾನಾ ಕ್ಷೇತ್ರಗಳಲ್ಲಿ ಸಂಶೋಧನೆಗಳ ಅಗತ್ಯತೆ ಇದೆ. ಆದರೆ ಸಂಶೋಧನೆಯ ವಿಧಾನ, ಯೋಜನೆ, ಅನ್ವೇಷಣೆಗಳು ಸಮರ್ಪಕವಾಗಿರಬೇಕು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಖರ್ ಮಾತನಾಡಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಕೌಶಲ್ಯ ಹೆಚ್ಚಿಸಿಕೊಂಡಾಗ ಮಾತ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧನೆ ಮೆರೆಯುವುದಕ್ಕೆ ಸಾಧ್ಯ. ಸಂಶೋಧನೆಗಳು ನಮ್ಮಲ್ಲಿನ ಸಾಮಥ್ರ್ಯವನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ವೆಂಕಟ್ರಮಣ ಭಟ್ ಪ್ರಸ್ತಾವನೆಗೈದರು. ಉಪನ್ಯಾಸಕರಾದ ಅತುಲ್ ಶೆಣೈ ಸ್ವಾಗತಿಸಿ, ಶಶಿಕಾಂತ್ ವಂದಿಸಿದರು. ಉಪನ್ಯಾಸಕಿ ಅನ್ನಪೂರ್ಣ ಕಾರ್ಯಕ್ರಮ ನಿರ್ವಹಿಸಿದರು. ಸಭಾಕಾರ್ಯಕ್ರಮದ ತರುವಾಯ ಸಂಶೊಧನಾ ಪ್ರಕ್ರಿಯೆಯ ಬಗೆಗೆ ಕಾರ್ಯಾಗಾರ ನಡೆಯಿತು.