ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಂತೋಷ್ ಸಾವು ಪ್ರಕರಣ : ಪ್ರತಿಭಟನೆಯಲ್ಲಿ ಶಾಸಕ ಭರತ್ ಶೆಟ್ಟಿ ಭಾಗಿ – ಕಹಳೆ ನ್ಯೂಸ್
ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಅಣೆಬಳಿಯಲ್ಲಿ ಜೂನ್ 22 ರಂದು ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಂತೋಷ್ ಮೃತಪಟ್ಟ ದಾರುಣ ಘಟನೆ ಖಂಡಿಸಿ ಶುಕ್ರವಾರ ಬೆಳಿಗ್ಗೆ ಗುರುಪುರ ಕೈಕಂಬ ಜಂಕ್ಷನ್‌ನಲ್ಲಿ ಸಾರ್ವಜನಿಕರು ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ರಸ್ತೆ ತಡೆದು ಬೃಹತ್ ಮಿಂಚಿನ ಪ್ರತಿಭಟನೆ ನಡೆಸಿದರು. ಈ ವೇಳೆ ಸುಮಾರು ಎರಡು ತಾಸು ಹೆದ್ದಾರಿ ವಾಹನ ಸಂಚಾರ ಸ್ಥಗಿತಗೊಂಡಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಶಾಸಕರಾದ ಡಾ. ಭರತ್ ಶೆಟ್ಟಿಯವರು ಮಾತನಾಡಿ, “ಬಸ್‌ಗಳ ಟೈಮಿಂಗ್ ಸಮಸ್ಯೆಯಾಗಿದೆ. ಮೊದಲಾಗಿ ಟೈಮಿಂಗ್ ಸರಿಪಡಿಸಬೇಕಿದೆ. ಅಪಘಾತ ತಪ್ಪಿಸುವುದರೊಂದಿಗೆ ಜೀವಹಾನಿ ತಪ್ಪಿಸಬೇಕು. ಹೆದ್ದಾರಿ ವಿಸ್ತರಣೆ ಹಿನ್ನೆಲೆಯಲ್ಲಿ ವಾಹನ ದಟ್ಟಣಿ ಹೆಚ್ಚಿದ್ದು, ಘನ ವಾಹನಗಳಿಗೆ ಪರ್ಯಾಯ ಮಾರ್ಗ ಹುಡುಕಬೇಕಿದೆ. ವೇಗ ಮಿತಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಯೋಚಿಸಬೇಕು. ನಾಳೆ ಡೀಸಿ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಹೆದ್ದಾರಿಗೆ ಸಂಬoಧಿಸಿದ ಹಲವು ಸಾಧಕ-ಬಾಧಕ, ಅಪಘಾತ ಹೆಚ್ಚಳ, ಟೈಮಿಂಗ್ ವಿಷಯದಲ್ಲಿ ಮಾತುಕತೆ ನಡೆಸಲಾಗುವುದು. ಸಂತೋಷ್ ಕುಟುಂಬಕ್ಕೆ ನ್ಯಾಯ ಒದಗಿಸುವುದರೊಂದಿಗೆ ಹೆದ್ದಾರಿ ವಾಹನ ಸವಾರರ ಹಿತ ಕಾಪಾಡುವುದು ಮುಖ್ಯವಾಗಿದೆ” ಎಂದರು.
ಶಾಸಕರಾದ ರಾಜೇಶ್ ನಾಯ್ಕ್, ಬಿಜೆಪಿ ಮುಖಂಡ ಜಗದೀಶ ಶೇಣವ, ಕಿಶೋರ್, ಪ್ರತಿಭಟನೆಯಲ್ಲಿ ಪಕ್ಷಾತೀತವಾಗಿ ಸಾರ್ವಜನಿಕರು ಭಾಗವಹಿಸಿದರು.