ಸೌಜನ್ಯ ಹತ್ಯೆ ಪ್ರಕರಣ : ಮರು ತನಿಖೆಗಾಗಿ ರಾಜ್ಯ ಸರ್ಕಾರಕ್ಕೆ ಸೌಜನ್ಯ ಕುಟುಂಬಸ್ಥರು ಮನವಿ – ಕಹಳೆ ನ್ಯೂಸ್
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ 2012ರಲ್ಲಿ ಅತ್ಯಾಚಾರವೆಸಗಿ ಹತ್ಯೆಗೀಡಾದ ಸೌಜನ್ಯಳ ಕುಟುಂಬಸ್ಥರು ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ಪ್ರಕರಣದ ಮರುತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಿದ್ದಾರೆ.
ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ಸಿಒಡಿ ಮತ್ತು ಸಿಬಿಐನಂತಹ ತನಿಖಾ ಸಂಸ್ಥೆಗಳು ವಿಫಲವಾಗಿವೆ. ಪ್ರಕರಣವನ್ನು ದುರ್ಬಲಗೊಳಿಸಲು ಪ್ರಬಲ ಜನರಿಂದ ಏಜೆನ್ಸಿಗಳ ಮೇಲೆ ಒತ್ತಡ ಹೇರಲಾಗಿದೆ ಎಂದು ಬೆಳ್ತಂಗಡಿಯ ಪ್ರಜಾಪ್ರಭುತ್ವ ವೇದಿಕೆಯ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಎಲ್ಲ ಪುರಾವೆಗಳನ್ನು ನಾಶಪಡಿಸಿದ್ದು, ಕೆಲವು ಪ್ರತ್ಯಕ್ಷದರ್ಶಿಗಳು ಸಾವನ್ನಪ್ಪಿದ್ದಾರೆ. ಪ್ರತ್ಯಕ್ಷದರ್ಶಿಗಳನ್ನು ಕೊಲ್ಲಲಾಗಿದೆ ಎಂಬುದು ನಮಗೆ ಗೊತ್ತಿದೆ. ಸಂತೋಷ್ ರಾವ್ ಪ್ರಮುಖ ಆರೋಪಿ ಅಲ್ಲ. ಇತ್ತೀಚೆಗೆ ಸಿಬಿಐ ನ್ಯಾಯಾಲಯದ ತೀರ್ಪು ಅದನ್ನು ಸಾಬೀತುಪಡಿಸಿದೆ ತನಿಖಾ ತಂಡಗಳ ಕಡೆಯಿಂದ ಹಲವು ಲೋಪಗಳಾಗಿವೆ ಎಂದು ತಿಮರೋಡಿ ಹೇಳಿದರು.
ಸೌಜನ್ಯಳ ತಾಯಿ ದೂರು ದಾಖಲಿಸಲು ಹೋದಾಗ ಬೆಳ್ತಂಗಡಿ ಪೊಲೀಸರು ಅದನ್ನು ದಾಖಲಿಸಿಕೊಳ್ಳಲು ಮುಂದಾಗಲಿಲ್ಲ. ಅಂದಿನ ತನಿಖಾಧಿಕಾರಿ ಸಾಕ್ಷ್ಯ ನಾಶಪಡಿಸುವ ಮೂಲಕ ಪ್ರಕರಣವನ್ನು ಮುಚ್ಚಿ ಹಾಕಿದ್ದರು. ತನಿಖಾ ಸಂಸ್ಥೆಗಳು ಪ್ರಭಾವಿ ಕುಟುಂಬದ ಕೆಲವರನ್ನು ನಾರ್ಕೋ ಪರೀಕ್ಷೆಗೆ ಒಳಪಡಿಸಿಲ್ಲ ಅಥವಾ ಡಿಎನ್‌ಎ ಪರೀಕ್ಷೆಯನ್ನೂ ನಡೆಸಿಲ್ಲ ಎಂದು ಅವರು ಆರೋಪಿಸಿದರು.
ಇದೀಗ ಉಜಿರೆಯಲ್ಲಿ 2012ರಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿರುವ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಕುಟುಂಬಸ್ಥರು ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ಪ್ರಕರಣದ ಮರುತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಿದ್ದಾರೆ.