ಮೂಡುಬಿದಿರೆ : ‘ವಿದ್ಯಾರ್ಥಿ ಜೀವನ ಎಂದರೆ ಸ್ವರ್ಗ ಇದ್ದಂತೆ. ಇಲ್ಲಿ ಹಲವಾರು ಆಕರ್ಷಣೆಗಳಿದ್ದರೂ, ನೀವು ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು’ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಆಳ್ವಾಸ್ ಕಾಲೇಜಿನ ರೆಡ್ ಕ್ರಾಸ್ ಘಟಕ ಮತ್ತು ಆಳ್ವಾಸ್ ಪುನರ್ಜನ್ಮದ ಆಶ್ರಯದಲ್ಲಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಹಾಗೂ ಕಳ್ಳಸಾಗಣೆ ವಿರೋಧಿ ದಿನದ ಅಂಗವಾಗಿ ನಡೆದ ಜಾಗೃತಿ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಹೆತ್ತವರು ತಮ್ಮ ಮಕ್ಕಳ ಭವಿಷ್ಯದ ಮೇಲೆ ಅಪಾರ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಆದರೆ, ಯುವಜನತೆ ಅಮಲು ಪದಾರ್ಥಗಳಿಗೆ ಆಕರ್ಷಣೆ ಆಗುವಷ್ಟು ವೇಗವಾಗಿ, ಒಳ್ಳೆ ವಿಚಾರಕ್ಕೆ ಆಕರ್ಷಣೆಯಾಗುವುದಿಲ್ಲ. ಈ ದುಶ್ಚಟದಿಂದ ಅನೇಕ ಮಕ್ಕಳ ಭವಿಷ್ಯ ನಾಶವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ಒಳ್ಳೆಯ ಗುಣ, ನಡತೆಯನ್ನು ಮೈಗೂಡಿಸಿಕೊಳ್ಳಬೇಕು. ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೆ ಹತ್ತು ಬಾರಿ ಯೋಚಿಸಿ, ಸರಿ ತಪ್ಪುಗಳನ್ನು ಗಮನದಲ್ಲಿ ಇಟ್ಟುಕೊಂಡು ಮುನ್ನಡೆಯಬೇಕು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಡಾ. ವಿನಯ್ ಆಳ್ವ ಮಾತನಾಡಿ, ಮಾದಕ ದ್ರವ್ಯ ಸೇವನೆಯು ಆರೋಗ್ಯಕ್ಕೆ ಮಾತ್ರವಲ್ಲ ಸಮಾಜಕ್ಕೂ ಮಾರಕ. ಯುವಜನತೆ ಈ ಬಗ್ಗೆ ಎಚ್ಚರ ವಹಿಸುವುದು ಅತ್ಯಗತ್ಯ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಭಾರತದಂತಹ ಅಭಿವೃದ್ಧಿಶೀಲ ದೇಶಕ್ಕೆ ಅಮಲು ಪದಾರ್ಥವು ತೀವ್ರ ಅಪಾಯಕಾರಿ. ದೇಶವನ್ನು ದುರ್ಬಲಗೊಳಿಸಲು ಅಮಲು ಪದಾರ್ಥ ದೊಡ್ಡ ಅಸ್ತ್ರ. ಇದು ವ್ಯಕ್ತಿಯ ಮಾನಸಿಕ ನೆಮ್ಮದಿಯ ಜೊತೆಗೆ ಮನೆ ಹಾಗೂ ಸಮಾಜದ ನೆಮ್ಮದಿಯನ್ನು ಹಾಳು ಮಾಡುತ್ತದೆ. ಎಂದರು
ಆಪ್ತ ಸಮಾಲೋಚಕ ಲೋಹಿತ್ ಕೆ. ಬಂಟ್ವಾಳ, ಮಂಗಳೂರಿನ ಫಾದರ್ ಮುಲ್ರ‍್ಸ್ ಮೆಡಿಕಲ್ ಕಾಲೇಜಿನ ಪೋರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ವಿಭಾಗದ ಡಾ ಹರೀಶ್ ಎಸ್ ಗೌಡ ಮಾದಕ ವಸ್ತು ಸೇವೆನೆ ಮತ್ತು ಅದರಿಂದ ಆಗುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು
ಬೆಂಕಿ ರಹಿತ ಅಡುಗೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ, ರೆಡ್‌ಕ್ರಾಸ್ ಘಟಕದ ವಿದ್ಯಾರ್ಥಿ ನಾಯಕರನ್ನು ಸನ್ಮಾನಿಸಲಾಯಿತು.
ವ್ಯವಹಾರ ಆಡಳಿತ ವಿಭಾಗದ ಪ್ರಾಧ್ಯಾಪಕ ಹಾಗೂ ಯೂತ್ ರೆಡ್‌ಕ್ರಾಸ್ ಸಂಯೋಜಕ
ಸುಹಾಸ್ ಶೆಟ್ಟಿ ಇದ್ದರು. ವಿದ್ಯಾರ್ಥಿಗಳಾದ ವೈಷ್ಣವಿ ಪಿ. ಶೇಟ್ ನಿರೂಪಿಸಿ, ಜೋಯ್ ವಿಲ್ಸನ್ ಸ್ವಾಗತಿಸಿ, ಸುಪ್ರಿತಾ ವಂದಿಸಿದರು.