ಪೇಜಾವರ ಶಾಖಾಮಠಕ್ಕೆ ಪೆರ್ಣಂಕಿಲದಲ್ಲಿ ಶಿಲಾನ್ಯಾಸ ನೇರವೇರಿಸಿದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ -ಕಹಳೆ ನ್ಯೂಸ್

ಉಡುಪಿ: ಉಡುಪಿ ಅಷ್ಟಮಠಗಳಲ್ಲೊಂದಾದ ಪೇಜಾವರ ಮಠದ ಆಶ್ರಯದಲ್ಲಿ ಸಂಪೂರ್ಣ ನವೀಕರಣಗೊಳ್ಳುತ್ತಿರುವ ಪೆರ್ಣಂಕಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಬಳಿ ಇರುವ ಶಾಖಾಮಠವನ್ನು ನವನಿರ್ಮಾಣಕ್ಕೆ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಶಿಲಾನ್ಯಾಸ ನೆರವೇರಿಸಿದರು.
ಈ ಪುರಾತನವಾದ ಶಾಖಾಮಠವು ಶಿಥಿಲಗೊಂಡಿದ್ದು, ಕ್ಷೇತ್ರದ ಸಮಗ್ರ ಜೀರ್ಣೋದ್ಧಾರದೊಂದಿಗೆ ಶಾಖಾಮಠವನ್ನು ಭಗವದ್ಭಕ್ತರ ಸಹಾಯದಿಂದ ಪಾರಂಪರಿಕ ರೀತಿಯಲ್ಲಿ ನವನಿರ್ಮಾಣ ಮಾಡಲುದ್ದೇಶಿಸಲಾಗಿದೆ.
ಕ್ಷೇತ್ರದ ವಾಸ್ತುತಂತ್ರಜ್ಞರಾದ ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಅವಧಾನಿಗಳು ಮತ್ತು ಕ್ಷೇತ್ರದ ತಂತ್ರಿಗಳಾದ ವಿದ್ವಾನ್ ಮಧುಸೂಧನ ತಂತ್ರಿಗಳ ಧಾರ್ಮಿಕ ಮಾರ್ಗದರ್ಶನದಲ್ಲಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ವಿದ್ವಾನ್ ಪೆರ್ಣಂಕಿಲ ಹರಿದಾಸ ಭಟ್, ಪ್ರಧಾನ ಕಾರ್ಯದರ್ಶಿ ಪೆರ್ಣಂಕಿಲ ಶ್ರೀಶ ನಾಯಕ್, ಮಠದ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್, ಪದಾಧಿಕಾರಿಗಳಾದ ಸದಾನಂದ ಪ್ರಭು, ಉಮೇಶ್ ನಾಯಕ್, ಸಂದೀಪ್ ನಾಯಕ್ ಹೆಬ್ಬಾಗಿಲು, ಮಠದ ವ್ಯವಸ್ಥಾಪಕರಾದ ಸುರೇಶ್ ತಂತ್ರಿ, ಮಹೇಶ್ ಕುಲಕರ್ಣಿ, ಶ್ರೀಪತಿ ಭಟ್, ಬಾಲಚಂದ್ರ ಭಟ್, ಸುನೀತಾ ನಾಯಕ್, ಬೇಬಿ ನಾಯಕ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀ ಮಠದ ಶಿಲಾನ್ಯಾಸದ ಸವಿನೆನಪಿಗಾಗಿ ಮಠದ ಪಕ್ಕದಲ್ಲಿ ಶ್ರೀಗಳು ಬಿಲ್ವಪತ್ರೆಯ ಗಿಡ ನೆಟ್ಟು, ಮೂಲಕ ದೇವಸ್ಥಾನದ ಪರಿಸರದಲ್ಲಿ ಸಾವಿರ ಸಸಿ ನೆಡುವ ವನಮಹೋತ್ಸವ ಅಭಿಯಾನಕ್ಕೆ ಚಾಲನೆ ನೀಡಿದರು.