ಇನ್ನು ದೀಪಾವಳಿಗೆ ನ್ಯೂಯಾರ್ಕ್ ಶಾಲೆಗಳಿಗೂ ರಜೆ – ಹಿಂದೂ ಸಂಸ್ಕೃತಿಗೆ ವಿದೇಶಿ ಮಾನ್ಯತೆ ಸಿಕ್ಕಿದ್ದು ಹೇಗೆ ಗೊತ್ತಾ? – ಕಹಳೆ ನ್ಯೂಸ್

ಭಾರತದ ಅಥವಾ ಹಿಂದೂ ಸಂಸ್ಕೃತಿ, ಆಚರಣೆಗಳಿಗೆ ಹಲವಾರು ಇತರೆ ದೇಶಗಳು ಮಾರು ಹೋಗಿವೆ. ಜೊತೆಗೆ ಹಲವಾರು ದೇಶಗಳಲ್ಲಿ ಹಿಂದೂ ಸಂಸ್ಕೃತಿಯ ಹಬ್ಬಗಳನ್ನು ಆಚರಿಸಲಾಗುತ್ತಿದೆ. ಇದೀಗ ವಿದೇಶಿಗರ ಭಾರತೀಯ ಸಾಂಸ್ಕೃತಿಕ ಪ್ರೀತಿಗೆ ಕನ್ನಡಿ ಹಿಡಿದಂತೆ, ದೀಪಾವಳಿ ಹಬ್ಬಕ್ಕೆ ನ್ಯೂಯಾರ್ಕ್ ನಲ್ಲೂ ಶಾಲೆಗಳಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. ಗಮನಾರ್ಹ ವಿಚಾರವೆಂದರೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿ ಸಂದರ್ಭದಲ್ಲಿ ನ್ಯೂಯಾರ್ಕ್ ಇಂತಹದ್ದೊAದು ಮಹತ್ವದ ನಿರ್ಧಾರ ಕೈಗೊಂಡಿದೆ.
ಇತ್ತೀಚೆಗಷ್ಟೇ, ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಪ್ರವಾಸ ಕೈಗೊಂಡಿದ್ದರು. ಮೋದಿ ಭೇಟಿಗೆ ಅಮೆರಿಕನ್ನರಿಂದ ಅಭೂತಪೂರ್ವ ಸ್ವಾಗತ ದೊರೆಯಿತು. ಪ್ರವಾಸದ ಕೊನೆಯ ದಿನ ಮೋದಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರಿಗೆ ಭಾರತೀಯ ಸಂಸ್ಕೃತಿಯ ದಶದಾನ ನೀಡಿ ಗೌರವಿಸಿದ್ದರು. ಈ ನಡುವೆ ಹಿಂದುಗಳ ಬೆಳಕಿನ ಹಬ್ಬ ದೀಪಾವಳಿಗೆ ನ್ಯೂಯಾರ್ಕ್ ಶಾಲೆಗಳಿಗೆ ಅಲ್ಲಿನ ಮೇಯರ್ ಎರಿಕ್ ಆಡಮ್ಸ್ ರಜೆ ಘೋಷಣೆ ಮಾಡಿದ್ದಾರೆ. ಈ ಕುರಿತು ಮಸೂದೆಯು ಅಂಕಿತಕ್ಕಾಗಿ ಗವರ್ನರ್ ಕ್ಯಾಥಿ ಹೂಚುಲ್ ಅವರ ಕಚೇರಿಗೆ ರವಾನೆಯಾಗಿದೆ. ಅಮೆರಿಕಾದ ಈ ನಡೆಯನ್ನು ಮೋದಿ ಭೇಟಿಗೆ ಸಿಕ್ಕ ಗೌರವ ಎಂದೇ ಬಿಂಬಿಸಲಾಗುತ್ತಿದೆ.
ದೀಪಾವಳಿಗೆ ನ್ಯೂಯಾರ್ಕ್ ಶಾಲೆಗಳಿಗೆ ರಜೆ ಘೋಷಣೆ ಮಾಡಿದ ಬೆನ್ನಲ್ಲೇ ಈ ಕುರಿತು ಮಾತನಾಡಿರುವ ಅಲ್ಲಿನ ಅಸೆಂಬ್ಲಿ ಸದಸ್ಯೆ ಜೆನಿಫರ್ ರಾಜ್ ಕುಮಾರ್, ‘ಈ ಘೋಷಣೆಗಾಗಿ ಎರಡು ದಶಕಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಸಾವಿರಾರು ಜನ ನಮ್ಮ ಈ ಹೋರಾಟಕ್ಕೆ ಬೆಂಬಲ ನಿಡಿದ್ದಾರೆ. ಅಂತಿಮವಾಗಿ ದಕ್ಷಿಣ ಏಷ್ಯಾ ಸಮುದಾಯದ ಎರಡು ದಶಕಗಳ ಹೋರಾಟಕ್ಕೆ ಇದೀಗ ಗೆಲುವು ಸಿಕ್ಕಂತಾಗಿದೆ. ಇದು ಭಾರತೀಯ ಸಂಸ್ಕೃತಿಗೆ ಸಿಕ್ಕ ಗೆಲುವು’ ಎಂದು ಹರ್ಷ ವ್ಯಕ್ತ ಪಡಿಸಿದ್ದಾರೆ.