Tuesday, January 21, 2025
ಸುದ್ದಿ

“ರಾಜ್ಯದಲ್ಲಿ ತುಘಲಕ್ ಆಡಳಿತವನ್ನು ಸ್ಥಾಪಿಸಲು ಕಾಂಗ್ರೇಸ್ ಹವಣಿಸುತ್ತಿದೆ” ಶಾಸಕ ವೇದವ್ಯಾಸ್ ಕಾಮತ್ ಕಿಡಿ – ಕಹಳೆ ನ್ಯೂಸ್

ಕಾಂಗ್ರೇಸ್ ಆಡಳಿತದ ಜನ ವಿರೋಧಿ ನೀತಿಯಿಂದ ಜನರು ಹೈರಾಣಾಗುತಿದ್ದು ದಿನಕಳೆದಂತೆ ರಾಜ್ಯದಲ್ಲಿ ತುಘಲಕ್ ಆಡಳಿತವನ್ನು ಸ್ಥಾಪಿಸಲು ಕಾಂಗ್ರೇಸ್ ಹವಣಿಸುತ್ತಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ (ಕೆ.ಯು.ಐ.ಡಿ.ಎಪ್.ಸಿ) ಮೂಲಕ ಸಾಲ ಪಡೆದು ಪ್ರಾರಂಭಿಸಿದ್ದ ಅನೇಕ ಡ್ರೈನೇಜ್ ಕಾಮಗಾರಿಗಳಿಗೆ ಕಾಂಗ್ರೇಸ್ ಸರಕಾರ ತಡೆ ಕೊಟ್ಟಿದೆ. ಮಳೆಗಾಲದ‌ ಸಂದರ್ಭದಲ್ಲಿ ಕಾಮಗಾರಿ ಸ್ಥಗಿತಗೊಳಿಸುವುದರಿಂದ ಪರಿಸರದ ಜನರಿಗೆ ಉಂಟಾಗುವ ಸಮಸ್ಯೆಯ ಕುರಿತು ಅರಿತೂ ಸರಕಾರ ನಿರ್ದಯಿಯಂತೆ ವರ್ತಿಸುತ್ತಿದೆ. ಈಗಾಗಲೇ ಹಲವು ಕಾಮಗಾರಿಗಳು ಅರ್ಧಕ್ಕೆ ನಿಲ್ಲಿಸಲಾಗಿದ್ದು, ಮಳೆಗಾಲದಲ್ಲಿ ಜನರು ಸಂಕಷ್ಟ ಅನುಭವಿಸುವಂತೆ ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಕಾಮತ್ ಹೇಳಿದ್ದಾರೆ.

ನಮ್ಮ ಆಡಳಿತದ ಸಂದರ್ಭದಲ್ಲಿ ನಗರದಲ್ಲಿ 24×7 ಕುಡಿಯುವ ನೀರು ಪೂರೈಕೆಗಾಗಿ ಜಲಸಿರಿ ಯೋಜನೆಯ ಮೂಲಕ ಸರಿಸುಮಾರು 810 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿತ್ತು. ಈ ಜನೋಪಯೋಗಿ ಯೋಜನೆಯನ್ನು ಕೂಡ ಸರಕಾರ ಸ್ಥಗಿತಗೊಳಿಸಿದೆ. ಈಗಿನ ಸರಕಾರ ಬಿಜೆಪಿಯ ಮೇಲಿನ ದ್ವೇಷದಿಂದ ಜನರ ಉಪಯೋಗಕ್ಕಾಗಿ ಬಿಡುಗಡೆಗೊಳಿಸಿದ ಅನುದಾನಗಳಿಗೆ ತಡೆ ನೀಡಿ ಜನರನ್ನು ಈ ರೀತಿಯಾಗಿ ಹಿಂಸಿಸುವುದು ಸರಿಯಲ್ಲ‌. ಇತಿಹಾಸದಲ್ಲಿ ತುಗಲಕ್ ಆಡಳಿತದ ಕುರಿತು ತಿಳಿದುಕೊಂಡಿದ್ದ ಜನರಿಗೆ ಮತ್ತೆ ಅದನ್ನು ನೆನಪಿಸುವ ಕೆಲಸವನ್ನು ಕಾಂಗ್ರೇಸ್ ಸರಕಾರ ಮಾಡುತ್ತಿದೆ ಎಂದು ಶಾಸಕ ಕಾಮತ್ ಕಿಡಿ ಕಾರಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಆದಾಯದ ಮೂಲಕ ನಗರದಲ್ಲಿ ಕೈಗೊತ್ತಿಕೊಂಡ ಅಭಿವೃದ್ಧಿ ಕಾಮಗಾರಿಗಳಿಗೂ ಕೂಡ ತಡೆ ಕೊಟ್ಟಿರುವ ಕಾಂಗ್ರೇಸ್ ಸರಕಾರ ಅಭಿವೃದ್ಧಿಯಲ್ಲೂ ರಾಜಕೀಯ ಮಾಡುತ್ತಿದೆ. ರಾಜ್ಯ ಸರಕಾರವು ಪಾಲಿಕೆಯ ಆಡಳಿತದಲ್ಲೂ ಹಸ್ತಕ್ಷೇಪ ಮಾಡುವ ಮೂಲಕ ನಗರದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸುತ್ತಿದೆ ಎಂದು ಹೇಳಿದ್ದಾರೆ.

ಜನರಿಂದ ಆಯ್ಕೆಯಾದ ಸರಕಾರ ದ್ವೇಷ ರಾಜಕೀಯ ಬಿಟ್ಟು ಸಂವಿಧಾನ ಬದ್ಧವಾಗಿ ಆಡಳಿತ ನಡೆಸಲಿ. ಅಹಂಕಾರದ ಪರಮಾವಧಿ ಹೀಗೆ ಮುಂದುವರಿದರೆ ಜನರೇ ಸರಕಾರವನ್ನು ಬೀದಿಗೆ ತರುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದ್ದಾರೆ.