Friday, September 20, 2024
ಸುದ್ದಿ

ಬದಲಾವಣೆ ಎದುರಿಸಲು ಸಿದ್ಧರಿಲ್ಲದಿದ್ದಾಗ ದುಃಖ ಉಂಟಾಗುತ್ತದೆ: ರಾಘವೇಶ್ವರ ಶ್ರೀ

ಮಂಗಳೂರು: ಬರುವ ಬದಲಾವಣೆಗಳನ್ನು ಎದುರಿಸಲು ಸಿದ್ದರಿಲ್ಲದೇ ಇದ್ದಾಗ ಮನುಷ್ಯ ದುಃಖವನ್ನು – ತೊಂದರೆಯನ್ನು ಅನುಭವಿಸುತ್ತಾನೆ. ಜೀವನದಲ್ಲಿ ಬರುವ ತಿರುವುಗಳನ್ನು ಎದುರಿಸಲು ಸಿದ್ಧರಾಗಿದ್ದಾಗ ಯಾವುದೇ ದುಃಖ ಬಾಧಿಸುವುದಿಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗಿರಿನಗರದ ಶಾಖಾಮಠದಲ್ಲಿ ಗೋಸ್ವರ್ಗ ಚಾತುರ್ಮಾಸ್ಯದ “ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಚಾತುರ್ಮಾಸ್ಯದ ತಯಾರಿ 4-5 ತಿಂಗಳ ಮೊದಲೇ ಆರಂಭಿಸಬೇಕು. ಆದರೆ ಈ ಬಾರಿಯ ಚಾತುರ್ಮಾಸ್ಯ 4-5 ದಿನದ ಬಾಕಿ ಇರುವಾಗ ಬದಲಾವಣೆಯಾಗಿ ಬೆಂಗಳೂರಿಗೆ ಸ್ಥಳಾಂತರವಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಸಾಮರ್ಥ್ಯ ಹಾಗೂ ಧೈರ್ಯದಿಂದ ಇದನ್ನು ಸವಾಲಾಗಿ ಸ್ವೀಕರಿಸಿದ ನಮ್ಮ ಕಾರ್ಯಕರ್ತರು ಚಾತುರ್ಮಾಸ್ಯವನ್ನು ಸಾಂಗವಾಗಿ ಹಾಗೂ ಯಥಾಯೋಗ್ಯವಾಗಿ ನೆರವೇರಿಸಿದರು. ಈ ಚಾತುರ್ಮಾಸ್ಯದ ಸಮಯದಲ್ಲಿ ಒಂದೂವರೆ ಲಕ್ಷಕ್ಕಿಂತ ಹೆಚ್ಚಿನ ಜನರು ಊಟ ಮಾಡಿದ್ದಾರೆ ಎಂಬ ಒಂದು ಅಂಶವೇ ಸಾಕು ಈ ಕಾರ್ಯಕ್ರಮ ಎಷ್ಟು ದೊಡ್ದಮಟ್ಟದ್ದು ಎಂದು ತೋರಿಸುತ್ತದೆ.

ನಮ್ಮ ಕಾರ್ಯಕರ್ತರ ಕುಶಲತೆ, ಶ್ರಮ ಹಾಗೂ ಧೈರ್ಯ ಶ್ಲಾಘನೀಯವಾಗಿದ್ದು, ಮಠದ ಕಾರ್ಯಕರ್ತರು ಏನನ್ನು ಬೇಕಾದರೂ ಮಾಡಬಲ್ಲರು, ಸಾಧಿಸಬಲ್ಲವರು ಎಂಬುದು ನಮ್ಮ ಹೆಮ್ಮೆ. ಶ್ರೀಮಠದ ಮುಂದಿರುವ ಸರ್ವ ಸವಾಲುಗಳನ್ನು ಎದುರಿಸಿ, ಮಠವನ್ನು ಎಲ್ಲ ರೀತಿಯ ಕ್ಲೇಶಗಳಿಂದ ಮುಕ್ತವಾಗಿಸೋಣ ಎಂದು ಕಾರ್ಯಕರ್ತರಿಗೆ ಕರೆನೀಡಿದರು.

ಹವ್ಯಕ ಮಹಾಮಂಡಲ, ಶಾಸನತಂತ್ರ ಹಾಗೂ ಚಾತುರ್ಮಾಸ್ಯ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಚಾತುರ್ಮಾಸ್ಯದಲ್ಲಿ ಸೇವೆಸಲ್ಲಿಸಿದ ಕಾರ್ಯಕರ್ತರು, ಮಾತೆಯರು ಶ್ರೀಗಳಿಗೆ ಫಲಸಮರ್ಪಿಸಿ ವಿಶೇಷ ಆಶೀರ್ವಾದ ಪಡೆದರು.