ಹೆಣ್ಣಿನಾಸೆಯಿಂದ ಮಂಗಳೂರಿಗೆ ಬಂದಿದ್ದ ಕೇರಳ ಮೂಲದ ಉದ್ಯಮಿಯನ್ನು ತಂಡವೊಂದು ಹನಿಟ್ರ್ಯಾಪ್ ಮಾಡಿ ಬ್ಲಾಕ್ಮೇಲ್ ಮಾಡಿದ್ದು, ಯುವತಿ ಸೇರಿ ಎಂಟು ಮಂದಿ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಳೆದ ಫೆಬ್ರವರಿ ತಿಂಗಳ 16ರಂದು ವಾಮಂಜೂರು ಬಳಿಯ ಮೂಡುಶೆಡ್ಡೆಯ ರೆಸಾರ್ಟಿನಲ್ಲಿ ಘಟನೆ ನಡೆದಿತ್ತು. ಕೇರಳ ಮೂಲದ ಮೊಯ್ದೀನ್ ಕುಂಞ(45) ಮತ್ತು ಮೊಹಮ್ಮದ್ ರುಕ್ಸಾದ್ ಎಂಬವರು ಬೇರೆಯವರ ಮೂಲಕ ಸಂಪರ್ಕಕ್ಕೆ ಬಂದಿದ್ದ ಮೂಡುಬಿದ್ರೆ ಮೂಲದ ಹುಡುಗಿಯ ಜೊತೆಗೆ ರೆಸಾರ್ಟಿಗೆ ತೆರಳಿದ್ದರು. ರಾತ್ರಿ ವೇಳೆ ಅಲ್ಲಿದ್ದಾಗಲೇ ತಂಡವೊಂದು ಕೊಠಡಿಗೆ ಎಂಟ್ರಿ ಕೊಟ್ಟಿದ್ದು, ಯುವಕರು ಫೋಟೋ, ವಿಡಿಯೋ ಮಾಡಿದ್ದರು. ಮೊಯ್ದೀನ್ ಕುಂಞಗೆ ಹಲ್ಲೆಗೈದು ಹಣಕ್ಕಾಗಿ ಪೀಡಿಸಿದ್ದರು. ಅಲ್ಲದೆ, ಇಂತಿಷ್ಟು ಹಣ ಕೊಟ್ಟರೆ ಮಾತ್ರ ಬಿಡ್ತೀವಿ, ಇಲ್ಲಾಂದ್ರೆ ವಿಡಿಯೋವನ್ನು ಜಾಲತಾಣದಲ್ಲಿ ಹಾಕುತ್ತೇವೆಂದು ಬ್ಲಾಕ್ಮೇಲ್ ಮಾಡಿದ್ದರು. ಬೆದರಿದ ಮೊಯ್ದೀನ್ ಕುಂಞ ಹಣ ಕೊಟ್ಟು ಅಲ್ಲಿಂದ ಪಾರಾಗಿ ಬಂದಿದ್ದರು.
ಆದರೆ ಯುವಕರ ತಂಡ ಪದೇ ಪದೇ ಕರೆ ಮಾಡಿ, ಹಣಕ್ಕಾಗಿ ಪೀಡಿಸಿದ್ದಾರೆ. ಗೂಗಲ್ ಪೇ, ಬ್ಯಾಂಕ್ ಅಕೌಂಟ್ ಮೂಲಕ ಹಣ ಹಾಕಿಸಿಕೊಳ್ಳುತ್ತಿದ್ದರು. ಮೂರು ತಿಂಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಹಣವನ್ನು ಕಳಕೊಂಡ ಮೊಯ್ದೀನ್ ಕುಂಞ ಇತ್ತೀಚೆಗೆ ಕಾವೂರು ಠಾಣೆಗೆ ತೆರಳಿ ದೂರು ನೀಡಿದ್ದರು. ಕಮಿಷನರ್ ಸೂಚನೆಯಂತೆ ಪ್ರಕರಣವನ್ನು ಕೈಗೆತ್ತಿಕೊಂಡ ಸಿಸಿಬಿ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಪ್ರೀತಮ್ ಬೊಂದೇಲ್, ಮೂಡುಶೆಡ್ಡೆ ಆಸುಪಾಸಿನ ಕಿಶೋರ್, ಮುರಳಿ, ಸುಶಾಂತ್, ಅಭಿ ಸೇರಿ ಮೂಡುಬಿದ್ರೆ ಮೂಲದ ಯುವತಿಯನ್ನು ಅರೆಸ್ಟ್ ಮಾಡಿದ್ದಾರೆ.
ಯುವತಿಗೂ ಬ್ಲಾಕ್ಮೇಲ್ ಮಾಡಿದ ಯುವಕರಿಗೂ ಕನೆಕ್ಷನ್ ಇದೆಯೆನ್ನುವ ಮಾಹಿತಿಯಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವತಿ ಇದೇ ರೀತಿಯ ಹಿನ್ನೆಲೆ ಹೊಂದಿದ್ದು, ಯುವಕರನ್ನು ಬಲೆಗೆ ಕೆಡವಿ ಹಣ ಮಾಡಿಕೊಳ್ಳುತ್ತಿದ್ದಳು. ಪ್ರೀತಮ್ ಅಲಿಯಾಸ್ ಸುರೇಂದ್ರ ಬೋಂದೆಲ್ ನಿವಾಸಿಯಾಗಿದ್ದು, 420 ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾನೆ. ಸೆಕ್ಯುರಿಟಿ ಗಾರ್ಡ್ ಒಬ್ಬನಿಗೆ ಹಲ್ಲೆಗೈದ ಬಗ್ಗೆ ಬರ್ಕೆ ಠಾಣೆಯಲ್ಲಿ ಕೇಸು ದಾಖಲಾಗಿತ್ತು.