Recent Posts

Monday, January 20, 2025
ಸುದ್ದಿ

ಮಹಿಳೆಯಾಗಿ ಹುಟ್ಟಿರುವುದಕ್ಕೆ ಹೆಮ್ಮೆ ಪಡುತ್ತೇನೆ: ಸೀತಾ ಕೋಟೆ – ಕಹಳೆ ನ್ಯೂಸ್

ಮಲ್ಲೇಶ್ವರ: ನಾನೊಬ್ಬ ಮಹಿಳೆಯಾಗಿ ಹುಟ್ಟಿರುವುದಕ್ಕೆ ನಾನು ತುಂಬಾ ಹೆಮ್ಮೆ ಪಡುತ್ತೇನೆ. ಸಂಸಾರದ ಜವಾಬ್ದಾರಿಗಳನ್ನು ನಿಭಾಯಿಸುತ್ತಾ, ಸಾಮಾಜಿಕವಾಗಿಯೂ ತೊಡಗಿಸಿಕೊಳ್ಳುವ ಮಹಿಳೆಯ ಕೌಶಲ್ಯ ಶ್ಲಾಘನೀಯ. ಮಕ್ಕಳು ಪುಸ್ತಕದಲ್ಲಿ ಮುಳುಗುವಂತೆ ಮಾಡಬಾರದು, ಸಮಾಜದ ಜೊತೆ ಬೆರೆಯುವಂತೆ ಮಾಡಬೇಕು ಎಂದು ಖ್ಯಾತ ಕಲಾವಿದೆ ಸೀತಾ ಕೋಟೆ ಹೇಳಿದರು.

ಮಲ್ಲೇಶ್ವರದ ಹವ್ಯಕ ಮಹಾಸಭೆಯ ಪ್ರಾಂಗಣದಲ್ಲಿ ಪ್ರಥಮಬಾರಿಗೆ ನಡೆದ “ಹವ್ಯಕ ಮಹಿಳಾ ಸಮಾವೇಶ”ದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ,ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ್ ಕಜೆ, “ಗೃಹಿಣಿ ಗೃಹಮುಚ್ಯತೇ” ಎಂದು ಹೇಳಲಾಗಿದೆ. ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಹೃದಯದ ಸ್ಥಾನವನ್ನು ನೀಡಲಾಗಿದ್ದು, ಆಕೆ ಸರಿಯಾಗಿ ಕಾರ್ಯ ನಿರ್ವಹಿಸಿದಾಗ ಸಂಪೂರ್ಣ ಮನೆ ಚನ್ನಾಗಿರುತ್ತದೆ. ಆದರೆ ಅದಕ್ಕೆ ವ್ಯತಿರಿಕ್ತವಾದಾಗ “ಗೃಹ ಮುಚ್ಚತ್ತೆ” ಆಗುತ್ತದೆ. ಹಾಗಾಗಿ ಮಹಿಳೆಯ ಪಾತ್ರ ಹಿರಿದು. ಮಾತೆಯರು ಒಟ್ಟಾದರೆ ಸಮಾಜ ಸಶಕ್ತವಾಗಿ, ಮುಂದಿನ ಪೀಳಿಗೆ ಉತ್ತಮ ಪೀಳಿಗೆಯಾಗುತ್ತದೆ. ಹವ್ಯಕ ಸಂಸ್ಕೃತಿ ಸಂಸ್ಕಾರಗಳನ್ನು ಜಾಗೃತಗೊಳಿಸುವ ಕಾರ್ಯವನ್ನು ಮಹಿಳೆಯರು ಮಾಡಬೇಕು ಎಂದು ಕರೆನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹವ್ಯಕ ಮಹಾಸಭೆಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಮಹಿಳಾ ಸಮಾವೇಶ ನಡೆದಿದ್ದು, ಇದರಲ್ಲಿ ಮಹಿಳೆಯರು ಒಗ್ಗಟ್ಟಾಗಿರುವುದು ಸಂತಸ ಉಂಟುಮಾಡಿದೆ. ಡಿಸೆಂಬರ್ 28, 29,30 ರಂದು ಅರಮನೆ ಮೈದಾನದಲ್ಲಿ “ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ” ನಡೆಯಲಿದ್ದು ನಾವೆಲ್ಲರೂ ಒಗ್ಗಟ್ಟಾಗಿ ಅದನ್ನು ಐತಿಹಾಸಿಕ ಕಾರ್ಯಕ್ರಮವನ್ನಾಗಿಸೋಣ ಎಂದು ತಿಳಿಸಿದರು.

ಒಗ್ಗಟ್ಟಾಗಿ ಅಪಪ್ರಚಾರಗಳಿಗೆ ತಕ್ಕ ಉತ್ತರವನ್ನು ನೀಡಬೇಕಿದೆ: ಡಾ. ಕಜೆ

ಹವ್ಯಕರೆಲ್ಲ ಒಗ್ಗಟ್ಟಾಗಿ ಅಪಪ್ರಚಾರಗಳಿಗೆ ತಕ್ಕ ಉತ್ತರವನ್ನು ನೀಡಬೇಕಿದೆ. ನಾಲ್ಕಾರು ಜನರಿರುವ ಸಣ್ಣ ಪುಟ್ಟ ಒಕ್ಕೂಟಗಳು, ಮಾಧ್ಯಮಗಳ ಮುಂದೆ ಸಮಾಜದ ಅವಹೇಳನ ಮಾಡುವ ಪ್ರಕ್ರಿಯೆಗಳಿಗೆ ಸಮಾಜ ಒಗ್ಗಟ್ಟಾಗಿ ಉತ್ತರ ನೀಡೋಣ ಎಂದು ಅಧ್ಯಕ್ಷರಾದ ಡಾ. ಕಜೆ ಹೇಳುತ್ತಿದ್ದಂತೆ ಸಭೆಯಲ್ಲಿ ಭಾರೀ ಕರತಾಡನದ ಮೂಲಕ ಸಹಮತ ವ್ಯಕ್ತವಾಯಿತು.

ಮಕ್ಕಳಿಗೆ ಸಂಸ್ಕಾರ ಕೊಡುವುದರಲ್ಲಿ ಮಹಿಳೆಯ ಪಾತ್ರ ಹಿರಿದಾಗಿದ್ದು, ಹುಟ್ಟಿನ ನಂತರವಲ್ಲ, ಗರ್ಭಾವಸ್ಥೆಯಿಂದಲೇ ಮಗುವಿಗೆ ಸಂಸ್ಕಾರ ಕೊಡುವ ಕಾರ್ಯ ಆರಂಭಿಸಬೇಕು. ಮಕ್ಕಳು ಹೆಚ್ಚಿನ ಅಂಕ ಪಡೆಯಬೇಕು ಎಂಬುದನ್ನಷ್ಟೇ ಯೋಚಿಸದೆ, ಮಗುವಿನ ಆಸಕ್ತಿಯ ವಿಷಯದಲ್ಲಿ ಮಕ್ಕಳನ್ನು ಬೆಳಸಬೇಕು ಎಂದು ಡಾ. ಸುವರ್ಣಿನಿ ಕೊಣಾಲೆ ಅಭಿಪ್ರಾಯಪಟ್ಟರು.

ಗಮನ ಸೆಳೆದ ಪ್ರತಿಭಾಪ್ರದರ್ಶನ

ಹವ್ಯಕ ಮಹಿಳೆಯರ ಕೋಲಾಟ, ಭರತನಾಟ್ಯ, ಯಕ್ಷನೃತ್ಯ, ರೂಪಕ, ಹಾಡು , ಫ್ಯಾಷನ್ ಷೋ ಸೇರಿದಂತೆ ಮಹಿಳಾ ಪ್ರತಿಭಾ ಪ್ರದರ್ಶನ ಕಾರ್ಯಕ್ರಮಗಳು ಜನರ ಗಮನಸೆಳೆದರೆ, ಮಹಿಳೆಯರಿಗಾಗಿ ಆಯೋಜಿಸಿದ್ದ ವಿವಿಧ ಆಟೋಟಗಳು, ಕರಕುಶಲ ಮೇಳ ಕಾರ್ಯಕ್ರಮಕ್ಕೆ ಮೆರುಗನ್ನು ತಂದುಕೊಟ್ಟಿತ್ತು. ಪ್ರಬಂಧ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾಧವರಿಗೆ ಬಹುಮಾನ ವಿತರಿಸಲಾಯಿತು.

50 ವರ್ಷ ದಾಂಪತ್ಯ ಜೀವನ ಪೂರೈಸಿದ ನಾಡಿನ ನಾನಾ ಭಾಗದ 8 ಹಿರಿಯ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಅಂತೆಯೇ 4 ಜನ ಮಹಿಳಾ ನಾಟಿ ವೈದ್ಯರನ್ನು ಗೌರವಿಸಲಾಯಿತು.

ಮಹಿಳಾ ಸಮಾವೇಶದ ಸಂಚಾಲಕಿ ಮಾಮತಾ ಜೋಷಿ ಮಾತನಾಡಿ, ಪ್ರತಿದಿನ ಮನೆಯ ದೈನಂದಿನ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮಹಿಳೆಯರು ಇಂದು ಒಗ್ಗಟ್ಟಾಗಿ ಇಲ್ಲಿ ಸೇರಿದ್ದೇವೆ. ಕಡಿಮೆ ಅವಧಿಯಲ್ಲಿ ಆಯೋಜಿತವಾದ ಈ ಕಾರ್ಯಕ್ರಮಕ್ಕೆ ಸಮಾಜದಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಗ್ಗಟ್ಟಾಗಿ ಸಮಾಜದ ಒಳಿತಿಗೆ ತೊಡಗಿಕೊಳ್ಳೋಣ ಎಂದ ಅವರು, ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ, ಡಾ. ಶಾರದಾ ಜಯಗೋವಿಂದ, ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಕಲಾ ಶಾಸ್ತ್ರಿ ಹಾಗೂ ಅನುಪಮಾ ಹೆಗಡೆ ಅತಿಥಿಗಳಾಗಿ ಭಾಗವಹಿಸಿದ್ದರು.

ಪ್ರಧಾನ ಕಾರ್ಯದರ್ಶಿ ಸಿ ಎ ವೇಣು ವಿಘ್ನೇಶ್, ಪ್ರಶಾಂತ್ ಭಟ್, ಶ್ರೀಧರ್ ಭಟ್ ಸಾಲೇಕೊಪ್ಪ, ಚಂಪಕಾ ಭಟ್ , ಅಖಿಲಾ ಹೆಗಡೆ, ಕಮಲಾಕ್ಷಿ ಹೆಗಡೆ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.