Recent Posts

Monday, January 20, 2025
ಸುದ್ದಿ

ಉಡುಪಿಯಲ್ಲಿ ಪತ್ರಿಕಾ ದಿನಾಚರಣೆ – ಕಹಳೆ ನ್ಯೂಸ್

ಉಡುಪಿ : ಇಂದು ಸಮಾಜದಲ್ಲಿ ಸತ್ಯ ಹೇಳುವುದೇ ಸತ್ಯ ಹೇಳುವುದೇ ಬಹಳ ದೊಡ್ಡ ಸವಾಲಿನ ಕೆಲಸ ಆಗಿದೆ. ಪತ್ರಕರ್ತರು ಯಾವುದೇ ಒತ್ತಡದ ಸಂದಭದಲ್ಲೂ ಸತ್ಯವನ್ನು ಹೇಳುವ ವಿವೇಚನೆಯನ್ನು ಬೆಳೆಸಿಕೊಳ್ಳಬೇಕು. ಅಂತಹ ವೌಲ್ಯಗಳನ್ನು ಉಳಿಸಿಕೊಳ್ಳುವುದು ಪತ್ರಕರ್ತರ ಜವಾಬ್ದಾರಿಯಾಗಿದೆ ಎಂದು ಎಂದು ಸುದ್ದಿಯಾನ ಡಿಜಿಟಲ್ ಮೀಡಿಯಾದ ಪ್ರಧಾನ ಸಂಪಾದಕ ಹರಿಪ್ರಸಾದ್ ಎ. ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ರಜತ ಮಹೋತ್ಸವ ಸಮಿತಿ, ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಉಡುಪಿ ಐಎಂಎ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಜಾಗತಿಕ ಪತ್ರಿಕಾ ಸ್ವಾತಂತ್ರ ಸೂಚ್ಯಂಕದ ಪಟ್ಟಿಯಲ್ಲಿ ಭಾರತ ಈ ವರ್ಷ ಸಾಕಷ್ಟು ಕುಸಿತ ಕಂಡಿದೆ. ಭಾರತದ ಸ್ಥಾನವು 150ರಿಂದ 161 ಕ್ಕೆ ಇಳಿಕೆಯಾಗಿದೆ. ನಾವು ಈ ಸೂಚ್ಯಂಕದಲ್ಲಿ ನೆರೆಯ ದೇಶಗಳಿಗಿಂತಲೂ ಹಿಂದೆ ಇದ್ದೇವೆ ಎಂದರು.

ಯಾವುದೇ ಸಂದರ್ಭದಲ್ಲೂ ಪತ್ರಕರ್ತರ ಜಾತಿವಾದಿ, ಕೋಮುವಾದಿ, ಭ್ರಷ್ಟಾಚಾರಿ ಆಗಬಾರದು. ಜಾತಿಯ ಆಧಾರದಲ್ಲಿ ಸುದ್ದಿಯನ್ನು ಮಾಡುವುದು ಮತ್ತು ಬೇರೆ ಧರ್ಮದ ಕಾರಣಕ್ಕೆ ವ್ಯಕ್ತಿಯನ್ನು ಟೀಕೆ ಮಾಡುವುದು ಮಾಧ್ಯಮ ಕ್ಷೇತ್ರಕ್ಕೆ ಮಾಡುವ ಮಹಾದ್ರೋಹ. ಪತ್ರಕರ್ತರ ಭ್ರಷ್ಟಾಚಾರಕ್ಕೆ ಒಳಗಾಗದರೆ ಅಂದೇ ಆತನ ಒಳಗಿರುವ ಪತ್ರಕರ್ತ ವೌನವಾಗುತ್ತಾನೆ ಎಂದರು.

ರಾಜಕಾರಣಿಗಳು ಮಾಧ್ಯಮಗಳಲ್ಲಿ ಹೂಡಿಕೆ ಮಾಡುತ್ತಿರುವ ಪರಿಣಾಮ ಇಂದು ನ್ಯೂಸ್‌ಗಳು ವೀವ್ಸ್  ಗಳಾಗಿ ಬದಲಾಗುತ್ತಿದೆ. ಆ ಮಾಧ್ಯಮದಲ್ಲಿರುವ ಪತ್ರಕರ್ತ ಆ ಪಕ್ಷದ ಪರವಾದ ಹಾಗೂ ವಿರೋಧ ಪಕ್ಷಗಳ ನೆಗೆಟಿವ್ ವೀವ್ಸ್ ಗಳನ್ನೇ ಹೇಳುತ್ತಾನೆ. ಅಲ್ಲಿ ನ್ಯೂಸ್ ಹೆಸರಿನಲ್ಲಿ ವೀವ್ಸ್ ಕೊಡುವ, ಅಭಿಪ್ರಾಯ ಹೇಳುವ ವ್ಯವಸ್ಥೆ ಬರುತ್ತದೆ ಎಂದು ಅವರು ತಿಳಿಸಿದರು.

ನಿಜವಾದ ಪತ್ರಕರ್ತರು ಎಲ್ಲ ವಲಯಗಳಲ್ಲಿ ಆಗುವ ಸರಿ ತಪ್ಪುಗಳ ಆವಲೋಕನ ಮಾಡುವ ಮಾನಸಿಕತೆ ಹಾಗೂ ವಿವೇಚನೆಯನ್ನು ಬೆಳೆಸಿ ಕೊಳ್ಳಬೇಕು. ನಮಗೆ ಯಾವುದೇ ಇಸಂ ಇಲ್ಲ. ನಮಗೆ ಇರಬೇಕಾಗಿರುವುದು ಕೇವಲ ಜರ್ನಲಿಂ. ಅದನ್ನು ಸರಿಯಾಗಿ ಅನುಸರಿಸಿದರೆ ನಮಗೆ ಅನೇಕ ವಿಚಾರಗಳನ್ನು ಎದುರಿಸಬಹುದಾಗಿದೆ ಎಂದು ಅವರು ತಿಳಿಸಿದರು.

ಸರಕಾರಗಳನ್ನು ಎಲ್ಲ ಕಾಲದಲ್ಲೂ ವಿಮರ್ಶೆಗೆ ಒಳಪಡಿಸಬೇಕಾಗಿರುವುದು ಪತ್ರಕರ್ತರ ಹಾಗೂ ಮಾಧ್ಯಮದ ಮುಖ್ಯ ಜವಾಬ್ದಾರಿಯಾಗಿದೆ. ಪತ್ರಕರ್ತರು ತೊಂದರೆಗೆ ಒಳಗಾದವರ ಪರವಾಗಿ ನಿಲ್ಲುವುದು ಕೂಡ ಬಹಳ ಮುಖ್ಯ. ಸಮಾಜದ ಕನ್ನಡಿ ಆಗಿರುವ ಮಾಧ್ಯಮ ಕ್ಷೇತ್ರದಲ್ಲಿರುವ ಒತ್ತಡಗಳನ್ನು ನಿಬಾಯಿಸುವುದೇ ಪತ್ರಕರ್ತನ ಮುಂದಿರುವ ದೊಡ್ಡ ಸವಾಲು ಆಗಿದೆ ಎಂದರು.

ನಾವು ಯಾವತ್ತಿಗೂ ಸತ್ಯ ಹೇಳಲು ಅಂಜಬಾರದು. ಅದಕ್ಕೆ ಅಂಜಿ ಸುಳ್ಳು ಸುದ್ದಿಯ ಪ್ರಚಾರಕರಾದರೆ ನಮಗೂ ಸುಳ್ಳು ಸುದ್ದಿಯ ಪ್ರಚಾರಕಕರಿಗೂ ಯಾವುದೇ ವ್ಯಾತ್ಯಾಸ ಇರುವುದಿಲ್ಲ. ವ್ಯವಸ್ಥೆಯ ಪರವಾಗಿ ಮಾತನಾಡುವುದು ಸುಲಭ. ಅದರಲ್ಲಿ ಯಾವುದೇ ಸವಾಲು ಇರುವುದಿಲ್ಲ. ಸರಕಾರಗಳನ್ನು ವಿಮರ್ಶೆಗೆ ಒಳಪಡಿಸಬೇಕೆ ಹೊರತು ಹೊಗಳುವ ಕೆಲಸ ಮಾಡಬಾರದು ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್. ಮಾತನಾಡಿ, ಮಾಧ್ಯಮಗಳು ಆಡಳಿತ ವರ್ಗಕ್ಕೆ ಕಾಣದ ಸಮಾಜ ದಲ್ಲಿನ ಅಂಕುಡೊoಕುಗಳ ದೃಷ್ಠಿಕೋನ ಕೊಡುತ್ತವೆ. ಮಾಧ್ಯಮ ಮತ್ತು ಆಡಳಿತ ವರ್ಗ ಜೊತೆಯಾಗಿ ಕೆಲಸ ಮಾಡಿದರೆ ಸಮಾಜದ ಏಳಿಗೆಗೆ ಶ್ರಮಿಸಲು ಸಾಧ್ಯ ವಾಗುತ್ತದೆ. ಪೆನ್ನಿನಲ್ಲಿ ಇರುವ ಶಕ್ತಿಯನ್ನು ಸರಿಯಾಗಿ ಬಳಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿದರು.

ಈ ಸಂದರ್ಭದಲ್ಲಿ ಕಾರ್ಕಳದ ಹಿರಿಯ ಪತ್ರಕರ್ತ ರಾಧಾಕೃಷ್ಣ ತೋಡಿಕಾನ ಅವರಿಗೆ ಪತ್ರಿಕಾ ದಿನಾಚರಣೆಯ ಗೌರವ ನೀಡಲಾಯಿತು. ಇಂಡಿಯನ್ ಫೆಡರೇಶನ್ ಆಫ್ ವರ್ಕಿಂಗ್ ಜರ್ನಲಿಸ್ಟ್ ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶಿರೂರು, ಕರ್ನಾಟಕ ಕಾರ್ನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ರಜತ ಮಹೋತ್ಸವ ಸಮಿತಿಯ ಸಂಚಾಲಕ ಮುಹಮ್ಮದ್ ಶರೀಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪತ್ರಕರ್ತ ರಾಕೇಶ್ ಕುಂಜೂರು ಕಾರ್ಯಕ್ರಮ ನಿರೂಪಿಸಿದರು