ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜನ್ನು ನವದೆಹಲಿಯ ಯುಜಿಸಿಯು ಸೆಂಟರ್ ಆಫ್ ಪೊಟೆನ್ಶಿಯಲ್ ಫಾರ್ ಎಕ್ಸಲೆನ್ಸ್ ಎಂದು ಗುರುತಿಸಿ 1.5 ಕೋಟಿ ರೂಗಳ ಅನುದಾನವನ್ನು ನೀಡಿದ್ದು, ಆ ಮೊತ್ತವನ್ನು ವಿವಿಧ ಶೈಕ್ಷಣಿಕ ಕಾರಣಗಳಿಗಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದೆ. ಆ ಹಣದ ಸಮರ್ಪಕ ಬಳಕೆಯ ಬಗೆಗೆ ಕಾಲೇಜು ರೂಪುರೇಷೆಯನ್ನು ಸಿದ್ಧಪಡಿಸಿದ್ದು, ಅದರ ಪರಿಶೀಲನೆಗಾಗಿ ಏಕವ್ಯಕ್ತಿ ಸಮಿತಿಯನ್ನು ಕಾಲೇಜಿಗೆ ಕಳುಹಿಸಿಕೊಟ್ಟಿದೆ.
ತಮಿಳ್ನಾಡಿನ ತಿರುಚನಾಪಳ್ಳಿಯ ಜಮಲ್ ಅಹ್ಮದ್ ಕಾಲೇಜಿನ ಪ್ರಾಚಾರ್ಯ ಡಾ.ಇಸ್ಮಾಯಿಲ್ ಮೊೈದೀನ್ ಅವರು ಸೋಮವಾರ ಯುಜಿಸಿ ಪ್ರತಿನಿಧಿಯಾಗಿ ವಿವೇಕಾನಂದ ಕಾಲೇಜಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ, ಸಂಚಾಲಕ ಎಂ.ಟಿ.ಜಯರಾಮ ಭಟ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರತಿನಿಧಿ ಗುಣಪಾಲ ಜೈನ್, ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಐಕ್ಯುಎಸಿ ಸಂಯೋಜಕ ಡಾ.ಶ್ರೀಧರ ಎಚ್.ಜಿ, ಇಂಗ್ಲಿಷ್ ಉಪನ್ಯಾಸಕ ಗಣೇಶ್ ಪ್ರಸಾದ್ ಎ, ಭೌತಶಾಸ್ತ್ರ ಪ್ರಾಧ್ಯಾಪಕ ಪ್ರೊ.ಶಿವಪ್ರಸಾದ್, ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಪ್ರಕಾಶ್ ಕುಮಾರ್ ಉಪಸ್ಥಿತರಿದ್ದರು.
ಡಾ.ಇಸ್ಮಾಯಿಲ್ ವಿವೇಕಾನಂದ ಕಾಲೇಜು ಅನುದಾನದ ಬಳಕೆಯ ಬಗೆಗೆ ಸಿದ್ಧಪಡಿಸಿದ ಸೂತ್ರಗಳನ್ನು ಗಮನಿಸಿ, ಸಲಹೆ ಸೂಚನೆಗಳನ್ನು ನೀಡಿದರು. ವಿವೇಕಾನಂದ ಕಾಲೇಜನ್ನು ದೇಶದ ಅತ್ಯುತ್ತಮ ಕಾಲೇಜುಗಳಲ್ಲೊಂದು ಎಂದು ಗುರುತಿಸಿ ಕಾಲೇಜಿನಲ್ಲಿ ಮತ್ತಷ್ಟು ಶೈಕ್ಷಣಿಕ ಉನ್ನತಿ, ಗುಣಮಟ್ಟ ಸುಧಾರಣೆಯ ಹಿನ್ನೆಲೆಯಲ್ಲಿ ಒಂದೂವರೆ ಕೋಟಿಯ ಮೊತ್ತವನ್ನು ಯುಜಿಸಿ ಅನುದಾನವಾಗಿ ನೀಡಿದೆ.