293 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ, ಬಾಲಸೋರ್ ರೈಲು ಅಪಘಾತದ ದುರಂತ ಕುರಿತು ರೈಲ್ವೆ ಸುರಕ್ಷತಾ ಆಯುಕ್ತರು ಈ ಅವಘಡಕ್ಕೆ ಕಾರಣ ಏನು ಎನ್ನುವ ವರದಿಯನ್ನು ಸಲ್ಲಿಸಿದ್ದಾರೆ
ಈ ಘಟನೆಯಲ್ಲಿ 293 ಜನರು ಪ್ರಾಣ ಕಳೆದುಕೊಂಡು, 1000 ಜನರು ಗಾಯಗೊಂಡಿದ್ದಾರೆ. ಮೂರು ರೈಲುಗಳು ಪರಸ್ಪರ ಡಿಕ್ಕಿ ಹೊಡೆದು ಸಂಭವಿಸಿದ ಈ ಅವಘಡಕ್ಕೆ ಕಾರಣಗಳೇನು ಎಂಬುವುದು ಈಗ ತನಿಖೆಯಿಂದ ಬಹಿರಂಗವಾಗಿದೆ.
ಒಡಿಶಾದ ಬಾಲಸೋರ್ ಬಳಿಯ ಬಹನಾಗಾ ಬಜಾರ್ ರೈಲು ನಿಲ್ದಾಣದ ಬಳಿ ಕೋರಮಂಡಲ್ ಎಕ್ಸ್ಪ್ರೆಸ್, ಗೂಡ್ಸ್ ರೈಲು ಮತ್ತು ಯಶವಂತಪುರ ಎಕ್ಸ್ಪ್ರೆಸ್ ಪರಸ್ಪರ ಡಿಕ್ಕಿ ಹೊಡೆದು 293 ಜನರು ಸಾವನ್ನಪ್ಪಿದ್ದರು. ಈ ದರುಂತದಲ್ಲಿ 1000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದು ಕಳೆದ ಮೂರು ದಶಕಗಳಲ್ಲೇ ನಡೆದ ಅತಿ ದೊಡ್ಡ ರೈಲು ಅಪಘಾತವಾಗಿದೆ.
ಮುಖ್ಯ ಹಳಿಯಲ್ಲಿ ಹೋಗಬೇಕಿದ್ದ ಕೋರಮಂಡಲ್ ಎಕ್ಸ್ಪ್ರೆಸ್.. ಗೂಡ್ಸ್ ರೈಲು ನಿಂತ ಲೂಪ್ ಲೈನ್ನಲ್ಲಿ ಹೇಗೆ ಮತ್ತು ಏಕೆ ಹೋಗಿದೆ ಎಂಬುದು ಇನ್ನೂ ಅನುಮಾನಾಸ್ಪದವಾಗಿತ್ತು. ಆದರೆ, ಘಟನೆಯ ಬಗ್ಗೆ ತನಿಖೆ ನಡೆಸಿರುವ ರೈಲ್ವೆ ಸುರಕ್ಷತಾ ಆಯುಕ್ತರು, ಸಿಗ್ನಲಿಂಗ್ ವಿಭಾಗದ ನೌಕರರದ್ದೇ ತಪ್ಪು ಎಂದು ತಮ್ಮ ವರದಿಯಲ್ಲಿ ತೀರ್ಮಾನಿಸಿದ್ದಾರೆ. ಆದ್ದರಿಂದಲೇ ಅಪಘಾತಕ್ಕೆ ಮಾನವ ದೋಷವೇ ಕಾರಣ ಎಂದು ನಿರ್ದಿಷ್ಟವಾಗಿ ಹೇಳಿದೆ. ಸುರಕ್ಷತಾ ಕಾರಣಗಳಿಗಾಗಿ ವಿನ್ಯಾಸದಲ್ಲಿ ಬದಲಾವಣೆಗಳನ್ನು ಮಾಡಿದ ನಂತರವೂ ಆ ಸುರಕ್ಷತಾ ಮಾನದಂಡಗಳನ್ನು ಅನುಸರಿಸದ ಕೆಲವು ಅಧಿಕಾರಿಗಳಿಂದ ಅಪಘಾತ ಸಂಭವಿಸಿದೆ ಎಂದು ವರದಿ ಬಹಿರಂಗಪಡಿಸಿದೆ.