ಉಡುಪಿ: ಉಡುಪಿ ಜಿಲ್ಲೆಯ ಕೋಟದ ರಸ್ತೆ ಬದಿಯಲ್ಲಿ ಸ್ಕೂಟರ್ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿರುವ ಪರಿಣಾಮ ಸವಾರ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತೆಕ್ಕಟ್ಟೆ ಸಮೀಪದ ಮಲ್ಯಾಡಿ ಎಂಬಲ್ಲಿ ಜು.4ರ ಮಧ್ಯರಾತ್ರಿ ನಡೆದಿದೆ. ಮೃತರನ್ನು ಸ್ಥಳೀಯ ನಿವಾಸಿ ದಿವಾಕರ್ ಶೆಟ್ಟಿ (65) ಎಂದು ಗುರುತಿಸಲಾಗಿದೆ.
ದಿವಾಕರ್ ಅವರು ರಾತ್ರಿ ವೇಳೆ ಸ್ಕೂಟರ್ ನಲ್ಲಿ ಮನೆಗೆ ಬರುತ್ತಿದ್ದಾಗ ಮನೆ ಸಮೀಪದ ರಸ್ತೆಯ ತಿರುವಿನಲ್ಲಿ ಮಳೆಯಿಂದಾಗಿ ನಿಯಂತ್ರಣ ತಪ್ಪಿ ರಸ್ತೆ ಬದಿ ಯಾವುದೇ ತಡೆಗೋಡೆ ಇಲ್ಲದ ಕಾರಣ ಸುಮಾರು 15 ರಿಂದ 20 ಅಡಿ ಆಳದ ಕೆರೆಗೆ ಸ್ಕೂಟರ್ ಸಮೇತ ಬಿದ್ದಿದ್ದಾರೆ.
ಕೂಡಲೇ ಗಮನಿಸಿದ ಸ್ಥಳೀಯರು ಪೊಲೀಸರಿಗೆ, ಅಗ್ನಿಶಾಮಕ ದಳ ಹಾಗೂ ಮುಳುಗುತಜ್ನ ಈಶ್ವರ ಮಲ್ಪೆ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಈಶ್ವರ ಮಲ್ಪೆ ಕೆರೆಗೆ ಧುಮುಕಿ ಮೊದಲು ಸ್ಕೂಟರ್ ಅನ್ನು ಮೇಲಕ್ಕೆ ಎತ್ತಿದರು.
ಬಳಿಕ ಹುಡುಕಾಟ ನಡೆಸಿ, ಇಂದು ನಸುಕಿನ ವೇಳೆ 1:30ರ ಸುಮಾರಿಗೆ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.