Friday, November 15, 2024
ಸುದ್ದಿ

ದೈವಾರಾಧನೆಯನ್ನು ಕೀಳುಮಟ್ಟಕ್ಕೆ ಇಳಿಸುವ ಪ್ರಯತ್ನ ಸೂಕ್ತವಲ್ಲ: ಅಭಯಚಂದ್ರ ಜೈನ್

ಮೂಡುಬಿದಿರೆ: ಇಂದು ದೈವಾರಾಧನೆಯನ್ನು ಕೀಳುಮಟ್ಟಕ್ಕೆ ಇಳಿಸಲಾಗುವಂತಹ ಪ್ರಯತ್ನಗಳು ನಡೆಯುತ್ತಿದ್ದು ಇದಕ್ಕೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತಾಗಬೇಕು ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.

ಅವರು ಮೂಡುಬಿದಿರೆ ಸಮಾಜಮಂದಿರ ಸಭಾದಲ್ಲಿ ಭಾನುವಾರ ತುಳುನಾಡ ದೈವರಾದನಾ ರಕ್ಷಣಾ ಚಾವಡಿ ಮೂಡುಬಿದಿರೆ ವಲಯದ ಆಶ್ರಯದಲ್ಲಿ ನಡೆದ ದೈವಾರಾಧಕರ ಬೃಹತ್ ಸಮಾವೇಶದಲ್ಲಿ ಮುಖ್ಯ ಅತಿಥಿಯ ನೆಲೆಯಲ್ಲಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇಮಾರು ಸಾಂದೀಪನೀ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ಸ್ವಾತಂತ್ರ್ಯ ದೊರಕಿದ ಫಲವಾಗಿ ಎಲ್ಲ ವರ್ಗದ ಜನರಲ್ಲಿ ಬದಲಾವಣೆ ಉಂಟಾಗಿದೆ, ಈ ಬದಲಾವಣೆ ಶಿಕ್ಷಣ ಪಡೆಯುವಲ್ಲಿ ಅನುಕೂಲಕರವಾಗಿದ್ದು ಇದರಿಂದಾಗಿ ಅಭಿವೃದ್ಧಿ ಸಾಧ್ಯವಾಗಿದೆ. ಇಲ್ಲಿನ ಜನರಿಗೆ ದೈವ ದೇವರುಗಳ ಬಗ್ಗೆ ಪ್ರೀತಿ- ವಿಶ್ವಾಸವಿದ್ದು ಉದ್ಯೋಗವನ್ನರಸಿಕೊಂಡು ಬೇರೆಡೆಗೆ ಧಾವಿಸಿದರೂ ದೈವಾರಾಧನೆಗೆ ಒಟ್ಟಾಗುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೈವಾರಾಧನೆಯ ನಡೆ-ನುಡಿ ಆಚಾರ ವಿಚಾರದಲ್ಲಿ ಶುದ್ಧವಾಗಿರುವುದು ಮುಖ್ಯ, ಈ ಆರಾಧನೆ ಕರ್ಮಮಾರ್ಗದಲ್ಲಿ ನಡೆಯಬೇಕಾಗುವುದು ಸೂಕ್ತ. ದೈವ ದೇವರುಗಳ ಮೇಲಿರುವ ಶ್ರದ್ಧಾ ಭಕ್ತಿಗೆ ಭಂಗ ತರುವುದು ಉಚಿತವಲ್ಲ, ದೈವ ದೇವರುಗಳ ವಿಚಾರದಲ್ಲಿ ಅಕ್ರಮದ ಮನೋಭೂಮಿಕೆಯನ್ನು ಇರಿಸಿಕೊಳ್ಳುವುದು ಸೂಕ್ತವಲ್ಲ ಎಂದು ತಿಳಿಸಿದರು.

ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಆಸ್ರಣ್ಣ ಮಾತನಾಡಿ, ಭೂತಕಾಲದಲ್ಲಿ ಕಳೆದು ಹೋಗಿರುವಂತಹ ಅನೇಕರು ಸತ್ಯ ಪುರುಷರಾಗಿ, ದೈವಗಳಾಗಿ ನೆಲೆನಿಂತಿರುವುದನ್ನು ನಾವು ಕಾಣಬಹುದಾಗಿದೆ. ವೇದಗಳೆಲ್ಲವೂ ಬರಹ ರೂಪದಲ್ಲಿದ್ದು, ದೈವ ಪಾಡ್ದನ ಮೌಖಿಕ ಪರಂಪರೆಯ ಜೊತೆಗೆ ಜಾನಪದೀಯ ನೆಲೆಗಟ್ಟನ್ನು ಹೊಂದಿದೆ. ಮಂತ್ರಗಳಿಗೂ ಪಾಡ್ದನಗಳಿಗೂ ನಿಕಟ ಸಂಬಂಧವಿದೆ, ದೈವಾರಾಧನೆಯ ಸಂದರ್ಭದಲ್ಲಿ ವಾದಕರು ನುಡಿಸುವ ಡಿಸ್ಕೋ ಮಾದರಿಯ ನುಡಿತಗಳು ಅಪಾಯಕಾರಿಯಾಗಿವೆ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾರೂರು ಖಂಡಿಗದ ರಾಮದಾಸ ಆಸ್ರಣ್ಣ, ಯಕ್ಷಗಾನದಲ್ಲಿ ಭೂತರಾಧನೆಯ ವೇಷಭೂಷಣಗಳನ್ನು ಬಳಸುವುದು ಸರಿಯಲ್ಲ, ದೈವ ನರ್ತನದ ಸಂದರ್ಭ ಮದ್ಯಪಾನ ಮಾಡಿ ಮುಂದುವರಿಯುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಇಂದಿನ ಕಾಲಮಾನದಲ್ಲಿ ಕೋಲಕ್ಕೂ ಕಾಲಮಿತಿಯ ಅನಿವಾರ್ಯತೆ ಇದೆ ಎಂದು ಅವರು ತಿಳಿಸಿದರು.

ತುಳುನಾಡ ದೈವಾರಾಧನಾ ರಕ್ಷಣಾ ಚಾವಡಿ ಜಿಲ್ಲಾಧ್ಯಕ್ಷ ದೇವರಾಜ್.ಡಿ. ಬಾಳ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಮಂಗಳೂರು ಸಂಸ್ಕಾರ ಭಾರತೀಯ ದಯಾನಂದ ಕತ್ತಲ್ ಸಾಲ್, ಪುತ್ತೂರು ದೈವರಾಧಕರ ಸಂಘದ ಅಧ್ಯಕ್ಷ ಡಾ. ನಿರಂಜನ ರೈ, ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ, ಗಗ್ಗರಮಾನದಿಗೆ ಚಾವಡಿಯ ಉದಯ ಆಚಾರ್ಯ, ಭೂತಾರಾಧನಾ ಸಮಿತಿ ಅಧ್ಯಕ್ಷ ಎನ್.ಕೆ ಸಾಲ್ಯಾನ್, ಪರವ ಸುಧಾರಕ ಸಂಘದ ಗಂಗಯ್ಯ ಪರವ, ಪಾಣಾರ ಸಂಘದ ನೋಣಯ್ಯ ಬಂಗೇರ, ಎ.ಐ.ಡಿ.ಎ.ಸಿ. ರಾಜ್ಯ ಹಿಂದುಳಿದ ಸಂಘದ ಅಧ್ಯಕ್ಷ ಎಲಿಮಲೆ ರಾಜೇಶ್ ಭಟ್, ತುಳುನಾಡ ದೈವಾರಾಧನಾ ರಕ್ಷಣಾ ಚಾವಡಿ ಮೂಡುಬಿದಿರೆ ವಲಯದ ಅಧ್ಯಕ್ಷ ರತ್ನಾಕರ ಶೆಟ್ಟಿ ಗುರುಬೆಟ್ಟು ಉಪಸ್ಥಿತರಿದ್ದರು.