ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ನಿರ್ಮಾಣ ವಿಚಾರ : ಅಧಿವೇಶನದಲ್ಲಿ ಪೌರಾಡಳಿತ ಸಚಿವರಿಗೆ ಶಾಸಕ ಅಶೋಕ್ ಕುಮಾರ್ ರೈ ಮನವಿ – ಕಹಳೆ ನ್ಯೂಸ್
ಪುತ್ತೂರು: ನಗರ ಸಭೆಯ ವ್ಯಾಪ್ತಿಯಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕೇಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿಧಾನ ಸಭೆಯ ಅಧಿವೇಶನದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸರಕಾರದ ಗಮನ ಸೆಳೆದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್ “ ಈ ಯೋಜನೆಯಡಿ ಅತಿ ಹೆಚ್ಚು ಭೂ ಸ್ವಾಧೀನ ಮತ್ತು ಅರ್ಥಿಕ ಹೊರೆ ಇರುವುದರಿಂದ ಸದ್ಯಕ್ಕೆ ಅದನ್ನು ಕೈ ಬಿಡಲಾಗಿದೆ. ಅದರ ಬದಲಾಗಿ ಗುಂಡಿಗಲಲ್ಲಿ ಸಂಗ್ರಹವಾಗುವ ಕೊಳಚೆ ನೀರನ್ನು ಟ್ಯಾಂಕರ್ ಗಳ ಮೂಲಕ ಸಂಗ್ರಹಿಸಿ ಪ್ರತ್ಯೇಕ ಘಟಕ ಸ್ಥಾಪನೆ ಮಾಡಿ ಅಲ್ಲಿ ಶುದ್ದೀಕರಣ ಮಾಡಲಾಗುವುದು” ಎಂದು ತಿಳಿಸಿದರು.
ಅದಕ್ಕೂ ಮೊದಲು ಗಮನ ಸೆಳೆಯುವ ಸೂಚನೆಯ ವೇಳೆ ವಿಷಯ ಪ್ರಸ್ತಾಪಿಸಿದ ಆಶೋಕ್ ರೈ “ಪುತ್ತೂರು ನಗರ ಸಭೆಯು 32.33 ಚ.ಕಿ. ಮೀ ವ್ಯಾಪ್ತಿ ಹೊಂದಿದೆ. ಇಲ್ಲಿ 16074 ವಸತಿಗಳು, 5378 ವಾಣಿಜ್ಯ ಕಟ್ಟಡಗಳು, 32 ಕೈಗಾರಿಕ ಕಟ್ಟಡಗಳು, 3057 ಇತರ ಕಟ್ಟಡಗಳಿವೆ. ಇಲ್ಲಿ ಪ್ರತಿದಿನ 12 ಎಂ. ಎಲ್. ಡಿ. ಯಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ನಗರ, ಕೈಗಾರಿಕೆ ಬೆಳೆಯುತ್ತಿರುವುದರಿಂದ ನೀರು ಕಲುಷಿತವಾಗುತ್ತಿದೆ. ಇದರಿಂದ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಅಗತ್ಯವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದರೂ, ಭೌಗೋಳಿಕ ವ್ಯವಸ್ಥೆಯಿಂದ ಯೋಜನೆ ತಿರಸ್ಕರಿಸಲ್ಪಟ್ಟಿದೆ. 15 ವರ್ಷ ಹಿಂದೆ ಮಾಡಿದ ಯೋಜನೆಯ ಬದಲಾಗಿ ಸದ್ಯ ನಗರ ಸಭೆಯ ವ್ಯಾಪ್ತಿಯಲ್ಲಿ ವೆಟ್ ವೆಲ್ ಸಿಸ್ಟಮ್ ಮತ್ತು ಎಸ್. ಟಿ ಪಿ. ಡಿಸೈನ್ ಮಾಡಿ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಿ ವರದಿಯನ್ನು ಸರ್ಕಾರ ತರಿಸಿಕೊಳ್ಳಬೇಕು. ಈ ಮೂಲಕ ಒಳಚರಂಡಿ ವ್ಯವಸ್ಥೆಯನ್ನು ಮಾಡಬೇಕೆಂದು ಸದನದ ಗಮನ ಸೆಳೆದರು.
ಇದಕ್ಕೆ ಉತ್ತರಿಸಿದ ಪೌರಾಡಳಿತ ಸಚಿವ ಕೊಳಚೆ ನೀರನ್ನು ಟ್ಯಾಂಕರ್ಗಳ ಮೂಲಕ ಸಂಗ್ರಹಿಸಿ, ಪ್ರತ್ಯೇಕ ಘಟಕ ಸ್ಥಾಪನೆ ಮಾಡಿ ಅಲ್ಲಿ ಶುದ್ದೀಕರಣ ಮಾಡಲಾಗುವುದರ ಜತೆಗೆ ಘನತ್ಯಾಜ್ಯ ಬೇರ್ಪಡಿಸಿ ಗೊಬ್ಬರವಾಗಿ ಪರಿವರ್ತಿಸಲು ಪುತ್ತೂರು ಬಳಿ ಐದೂವರೆ ಎಕರೆ ಜಮೀನಿನಲ್ಲಿ ಮಲ ತ್ಯಾಜ್ಯ ಹಾಗೂ ಕಲ್ಮಷ ಸಂಸ್ಕರಣ ಘಟಕ (ಎಫ್ಎಸ್ಎಸ್ ಎಂ) ಸ್ಥಾಪಿಸಲು ಯೋಜಿಸಲಾಗಿದೆ ಎಂದರು.