Saturday, November 23, 2024
ಸುದ್ದಿ

ನಾಳೆಯಿಂದ ಶಿರಾಡಿ ಘಾಟಿ ರಸ್ತೆಯಲ್ಲಿ ವಾಹನಗಳ ಸಂಚಾರ: ಶಶಿಕಾಂತ್ ಸೆಂಥಿಲ್ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ರಸ್ತೆಯಲ್ಲಿ ಬಸ್‌ಗಳ ಸಂಚಾರಕ್ಕೆ ಕೊನೆಗೂ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಅ. 3ರ ಬೆಳಗ್ಗಿನಿಂದ ಎಲ್ಲ ಪ್ರಯಾಣಿಕ ವಾಹನಗಳೂ ಸಂಚರಿಸಬಹುದು ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಹಾಸನ ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿದ್ದೇನೆ. ಅಲ್ಲದೆ ನಮ್ಮ ಪೊಲೀಸ್ ತಂಡ ಶಿರಾಡಿಯಲ್ಲಿ ಪರಿಶೀಲನೆ ನಡೆಸಿದೆ. ಅದರಂತೆ ವೋಲ್ವೊ, ರಾಜಹಂಸ ಸಹಿತ ಎಲ್ಲ ಬಸ್‌ಗಳೂ ಶಿರಾಡಿ ಘಾಟಿಯಲ್ಲಿ ಸಂಚರಿಸಬಹುದು. ಮುನ್ನೆಚ್ಚರಿಕೆ ಕ್ರಮವಾಗಿ ಶಿರಾಡಿ ಘಾಟಿಯ ಗುಡ್ಡ-ಕಣಿವೆ ಕುಸಿದಿರುವ ನಾಲ್ಕು ಕಡೆ ಪೊಲೀಸ್ ಹಾಗೂ ಹೆದ್ದಾರಿ ಇಲಾಖೆ ಸಿಬ್ಬಂದಿಯನ್ನು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ನಿಯೋಜಿಸಲಾಗುವುದು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹೆದ್ದಾರಿಯ ಕಣಿವೆ ಬದಿಯ ಭಾಗದಲ್ಲಿ ತಳಮಟ್ಟದಿಂದ ಕುಸಿತ ಆಗಿದೆ. ಮೇಲ್ಭಾಗ ಮಾತ್ರ ಸರಿಯಿದೆ. ಹಾಗಾಗಿ ಅಧಿಕ ಭಾರದ ಸರಕು ವಾಹನಗಳು ಸಂಚರಿಸುವುದು ಅಪಾಯಕಾರಿಯಾಗಿದೆ. ಅದಕ್ಕಾಗಿ ಕೆಲ ವಾರಗಳ ಶಿರಾಡಿ ಮೇಲೆ ನಿಗಾ ಇರಿಸಲಾಗುವುದು. ಬಳಿಕ ಸೂಕ್ತ ಎಂದು ಕಂಡಲ್ಲಿ ಸರಕು ವಾಹನಗಳಿಗೆ ಅನುಮತಿ ನೀಡಲಾಗುವುದು ಎಂದ ಡಿಸಿ, ಕುಸಿತವಾದೆಡೆ ಕಣಿವೆ ಭಾಗದಿಂದಲೇ ರಿಟೇನಿಂಗ್ ವಾಲ್ ನಿರ್ಮಾಣವಾಗಬೇಕಿದೆ. ಇದಕ್ಕೆ ಈಗಾಗಲೇ ಹೆದ್ದಾರಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಾರಿ ಅತಿವೃಷ್ಟಿ, ಭೂಕುಸಿತ ಇತ್ಯಾದಿಗಳಿಂದಾಗಿ ಶಿರಾಡಿ ಹೆದ್ದಾರಿ ಮೇಲೆ ಯಾವುದಾದರೂ ಪರಿಣಾಮ ಆಗಿದೆಯೆ? ಬಿರುಕು ಉಂಟಾಗಿದೆಯೇ ಇತ್ಯಾದಿ ವಿಷಯಗಳ ಬಗ್ಗೆ ಬೆಳಕು ಚೆಲ್ಲುವುದಕ್ಕಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞ ತಂಗವೇಲು ಎಂಬುವರನ್ನು ದ.ಕ ಜಿಲ್ಲಾಡಳಿತ ವತಿಯಿಂದ ನಿಯೋಜಿಸಲಾಗಿದೆ. ಅವರು ಇನ್ನೊಂದು ವಾರದಲ್ಲಿ ಆಗಮಿಸಿ ಅಧ್ಯಯನ ಕೈಗೊಳ್ಳಲಿದ್ದಾರೆ ಎಂದು ಡಿಸಿ ತಿಳಿಸಿದರು.

ಹಲವು ವರ್ಷಗಳಿಂದ ತುಂಬೆ ಅಣೆಕಟ್ಟೆಯಲ್ಲಿ ಮರಳು, ಹೂಳು ತುಂಬಿಕೊಂಡಿದೆ. ಅದನ್ನು ಹೊರತೆಗೆದು ನಗರದ ಅಗತ್ಯಕ್ಕೆ ಪೂರೈಸಲು ನಿರ್ಧರಿಸಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಅನುಮತಿ ನೀಡಿದೆ. ಡ್ಯಾಂನಲ್ಲಿ ಹೂಳು ತುಂಬಿದ್ದರಿಂದ ಅದನ್ನು ತೆಗೆಯಲೇಬೇಕು. ಇಲ್ಲವಾದರೆ ಹತ್ತಿರದ ಗ್ರಾಮಗಳಿಗೆ ನೆರೆ ಉಂಟಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕರಾವಳಿ ನಿಯಂತಣ ವಲಯ(ಸಿಆರ್‌ಝಡ್) ದಲ್ಲಿ ಮರಳು ತೆಗೆಯುವುದಕ್ಕಾಗಿ ಬೆಥಮೆಟ್ರಿ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಮೀನುಗಾರರ ಅಭಿಪ್ರಾಯವನ್ನೂ ಪಡೆಯಲಾಗಿದೆ. ಮುಂದಿನ ಹಂತದಲ್ಲಿ ಎನ್‌ಐಟಿಕೆ ತಜ್ಞರು ವರದಿ ಸಿದ್ಧಪಡಿಸಲಿದ್ದಾರೆ. ಮುಂದೆ ರಾಜ್ಯಮಟ್ಟದಲ್ಲಿ ಅನುಮೋದನೆ ಪಡೆದು ಸಿಆರ್‌ಝಡ್ ಪ್ರದೇಶದಲ್ಲಿ ದೋಣಿಗಳ ಓಡಾಟಕ್ಕೆ ಅನುಕೂಲವಾಗುವಂತೆ ಮರಳಿನ ದಿಣ್ಣೆಗಳನ್ನು ತೆರವು ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಡಿಸಿ ತಿಳಿಸಿದರು.

ಕೂಳೂರಿನಲ್ಲಿ ಫಲ್ಗುಣಿ ನದಿಗೆ ಅಡ್ಡವಾಗಿ ಹೊಸ ಸೇತುವೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಲಿದ್ದು, ಅದಕ್ಕಾಗಿ ಹಳೆಯ ಸೇತುವೆ (ಇಕ್ಕೆಲಗಳಲ್ಲಿ ಕಮಾನು ಇರುವ ಸೇತುವೆ)ಯನ್ನು ಶೀಘ್ರ ಬಂದ್ ಮಾಡಲಾಗುವುದು. ಹಳೆಯ ಸೇತುವೆ ಬಳಕೆಗೆ ಯೋಗ್ಯವಲ್ಲ ಎಂದು ತಜ್ಞರು ಇತ್ತೀಚೆಗಷ್ಟೇ ವರದಿ ನೀಡಿದ ಹಿನ್ನೆಲೆಯಲ್ಲಿ ಅದನ್ನು ಬಂದ್ ಮಾಡಲಾಗುವುದು. ಆ ಬಳಿಕ ಇನ್ನೊಂದು ಸೇತುವೆಯಲ್ಲಿ ವಾಹನಗಳು ಸಂಚರಿಸಲಿವೆ, ಇವೆರಡು ಸೇತುವೆ ಮಧ್ಯೆ ಹೊಸ ಸೇತುವೆಯನ್ನು ನಿರ್ಮಿಸುವ ಕೆಲಸ ಕೈಗೆತ್ತಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ದೀರ್ಘ ಕಾಲ ಶಿರಾಡಿ ಘಾಟಿ ಹಾಗೂ ಸಂಪಾಜೆ ಘಾಟಿ ಹೆದ್ದಾರಿಗಳಲ್ಲಿ ಸಂಚಾರ ನಿಷೇಧ ಇದ್ದ ಕಾರಣ ಚಾರ್ಮಾಡಿಯಲ್ಲೇ ಘನವಾಹನಗಳು ಸಂಚರಿಸಿರುವುದರಿಂದ ತೀರಾ ಹದಗೆಟ್ಟಿರುವುದು ನಿಜ. ಅದಕ್ಕಾಗಿ ಭಾರಿ ವಾಹನಗಳು ಶಿರಾಡಿಯಲ್ಲಿ ಪುನಾರಂಭಗೊಂಡ ಬಳಿಕವಷ್ಟೇ ಚಾರ್ಮಾಡಿ ಹೆದ್ದಾರಿ ದುರಸ್ತಿ ಪಡಿಸಲಾಗುವುದು ಎಂದರು.