ನಂದಾವರದಲ್ಲಿ ಗುಡ್ಡ ಕುಸಿತ ಪ್ರಕರಣ; ಗಾಯಗೊಂಡಿದ್ದ ಶಫಾರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಶಾಸಕ ರಾಜೇಶ್ ನಾಯ್ಕ್ –ಕಹಳೆ ನ್ಯೂಸ್
ಜರಿದು ಮಣ್ಣಿನೊಳಗೆ ಸಿಲುಕಿಕೊಂಡು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ನಂದಾವರ ಗುಂಪುಮನೆ ನಿವಾಸಿ ಸಫಾ ಅವರನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ಬೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಘಟನೆಯಲ್ಲಿ ಸಫಾಳ ತಾಯಿ ಮೃತಪಟ್ಟಿದ್ದು, ಕುಟುಂಬಕ್ಕೆ ಸಾಂತ್ವನ ಹೇಳಿದರು.ಘಟನೆಯ ಬಗ್ಗೆ ಮಾಹಿತಿ ಪಡೆದ ಶಾಸಕರು ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು. ಇದೇ ವೇಳೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಸಫಾಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ವೈಯಕ್ತಿಕ ನೆಲೆಯಲ್ಲಿ ಭರಿಸುವುದಾಗಿ ಅವರು ಕುಟುಂಬಕ್ಕೆ ಭರವಸೆ ನೀಡಿದರು.
ಸರಕಾರದಿಂದ ಸಿಗಬೇಕಾದ ಪರಿಹಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ತಿಳಿಸಿದರು.
ಘಟನೆ ನಡೆದ ಸಂದರ್ಭದಲ್ಲಿ ಶಾಸಕರು ಬೆಂಗಳೂರಿನಲ್ಲಿ ಅಧಿವೇಶನದಲ್ಲಿ ಭಾಗವಹಿಸಿದ್ದ ಕಾರಣ ಇಂದು ಬೆಳಿಗ್ಗೆ ಆಸ್ಪತ್ರೆಗೆ ಬೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಸಜೀಪ ಮುನ್ನೂರು ಗ್ರಾ.ಪಂ.ವ್ಯಾಪ್ತಿಯ ನಂದಾವರ ಗುಂಪು ಮನೆಯೊಂದಕ್ಕೆ ಬೆಳಿಗ್ಗೆ ಸುಮಾರು 5.30 ರ ವೇಳೆ ಗುಡ್ಡ ಜರಿದು ಮಹಮ್ಮದ್ ನಂದಾವರ ಅವರ ಪತ್ನಿ ಹಾಗೂ ಮಗಳು ಸಫಾ ಮಣ್ಣಿನೊಳಗೆ ಸಿಲುಕಿಕೊಂಡಿದ್ದರು.
ನಿರಂರತವಾಗಿ ಸುರಿಯುವ ಮಳೆ ನಡುವೆಯೂ ಸ್ಥಳೀಯರು, ಅಗ್ನಿಶಾಮಕ ದಳ ಹಾಗೂ ಪೋಲೀಸ್ ಇಲಾಖೆಯ ಸಿಬ್ಬಂದಿಗಳ ಕಾರ್ಯಚರಣೆಯಿಂದ ಸಫಾ ಎಂಬವಳನ್ನು ರಕ್ಷಣೆ ಮಾಡಿ ಕೂಡಲೇ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಸಫಾ ಅವರ ತಾಯಿ ಝರಿನಾ ಅವರನ್ನು ಮಣ್ಣಿನೊಳಗಿಂದ ಹೊರತೆಗೆದು ಆಸ್ಪತ್ರೆಗೆ ಕೊಂಡುಹೋಗಿ ಪರೀಕ್ಷಿಸಿದಾಗ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದರು.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಸಹಿತ ತಾಲೂಕಿನ ಅಧಿಕಾರಿಗಳು ಬೇಟಿ ನೀಡಿದ್ದರು.