ಮೂಡುಬಿದಿರೆ: ಶಿರ್ತಾಡಿ ಗ್ರಾಮ ಪಂಚಾಯತ್ ನ ನೇತೃತ್ವದಲ್ಲಿ ಶಿರ್ತಾಡಿಯ ಪೇಟೆ ಬಳಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸಂಜೀವಿನಿ ಕಟ್ಟಡಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿತು.
ಪಂಚಾಯತ್ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಅವರು ಶಿಲಾನ್ಯಾಸಗೈದು ಮಾತನಾಡಿ ಸಂಜೀವಿನಿ ಸ್ವಸಹಾಯ ಗುಂಪುಗಳಿಗೆ ಸುಮಾರು ರೂ. 26ಲಕ್ಷ ಅನುದಾನವನ್ನು ಉದ್ಯೋಗ, ಸ್ವ ಉದ್ಯೋಗಕ್ಕಾಗಿ ನೀಡಲಾಗಿದೆ. ಮಹಿಳೆಯರು ಸ್ವಾವಲಂಬಿಯಾಗಿ ಬದುಕನ್ನು ಕಟ್ಟಿಕೊಳ್ಳಲು ಸಂಜೀವಿನಿಯ ಕಾರ್ಯಕ್ರಮಗಳು ಪ್ರೇರಕವಾಗಿದೆ. ಸಂಜೀವಿನಿ ಗುಂಪುಗಳ ನಿರ್ವಹಣೆಯಲ್ಲಿ ಗ್ರಾಮದ ಸ್ವಚ್ಛತಾ ಅಭಿಯಾನಕ್ಕೆ ಯೋಜನೆಗಳನ್ನು ರೂಪಿಸಲಾಗಿದೆ.
ತನ್ನ ಅವಧಿಯಲ್ಲಿ ಶಿರ್ತಾಡಿಯಲ್ಲಿ ಪಂಚಾಯತ್‌ಗೆ ನೂತನ ಕಟ್ಟಡ, ವಿದ್ಯುತ್ ಉಪಕೇಂದ್ರಕ್ಕೆ ಶಿಲಾನ್ಯಾಸ ನಡೆಸಲಾಗಿದ್ದು, 3 ಗ್ರಾಮಗಳಲ್ಲಿ ಹಿಂದು ರುದ್ರ ಭೂಮಿ ನಡೆಸಲು ಸೂಕ್ತ ದಾಖಲೆಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.
ಪಂಚಾಯತು ವ್ಯಾಪ್ತಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳಿಗೆ ಸಿಂಟೆಕ್ಸ್, ಕುರ್ಚಿ ಹಾಗೂ ಗ್ರಾಮದಲ್ಲಿರುವ ವಿಕಲಚೇತನರಿಗೆ, ವಿದ್ಯಾಭ್ಯಾಸಕ್ಕೆ ಹಾಗೂ ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು ನೀಡಿ ಪ್ರೋತ್ಸಾಹಿಸಲಾಯಿತು.