ಬಂಟ್ವಾಳ ತಾಲೂಕಿನ ಆಂಗ್ಲ ಮಾಧ್ಯಮ ಶಾಲೆ ವಿದ್ಯಾನಗರ ಪಾಳ್ಯದಲ್ಲಿ ಜುಲೈ 15ರಂದು ಶಾಲಾ ವಿಜ್ಞಾನ ಸಂಘದ ಉದ್ಘಾಟನೆಯನ್ನು ನೆರವೇರಿಸಲಾಯಿತು.
ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಪ್ರಹ್ಲಾದ್ ಜೆ ಶೆಟ್ಟಿ ಯವರು ಚಂದ್ರಯಾನ -3ರ ಉಡಾವಣೆಯ ಕಾರ್ಯವನ್ನು ಪ್ರಶಂಶಿಸುತ್ತಾ, ಭಾರತವನ್ನು ಗುರುತಿಸುವ ಕೆಲಸ ನಮ್ಮ ವಿಜ್ಞಾನಿಗಳಿಂದಾಗುತ್ತಿದೆ. ನಮ್ಮ ಶಾಲಾ ವಿದ್ಯಾರ್ಥಿಗಳು ಅಂತಹ ವಿಜ್ಞಾನಿಗಳಾಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸರಕಾರಿ ಪ್ರೌಢಶಾಲೆ ನೆರಳಕಟ್ಟೆಯ ವಿಜ್ಞಾನ ಅಧ್ಯಾಪಕರಾದ ಸುಧಾಕರ ಶೆಟ್ಟಿಯವರು ” ಹೊಸ ತಂತ್ರಜ್ಞಾನ ಯುಗದಲ್ಲಿ ಸಮೂಹ ಮಾಧ್ಯಮಗಳನ್ನು ಅವಶ್ಯಕತೆಗಳಿಗೆ ತಕ್ಕಂತೆ ಉಪಯೋಗಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆಯು ವಿದ್ಯಾರ್ಥಿಗಳಿಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿರುವುದು ಶ್ಲಾಘನೀಯ ” ಎಂದರು.
ಆಡಳಿತ ಅಧಿಕಾರಿ ಶ್ರೀ ರವೀಂದ್ರ ಡಿ ಯವರು ” ನಮ್ಮ ಪರಿಸರವೇ ಒಂದು ಪ್ರಯೋಗಾಲಯವಾಗಿದೆ. ಪ್ರಶ್ನಿಸುವ ಕೌಶಲ್ಯ ಮತ್ತು ಉತ್ತರವನ್ನು ಕಂಡುಕೊಳ್ಳಲು ನಡೆಸುವ ಪ್ರಯತ್ನವೇ ನಮ್ಮ ವಿಜ್ಞಾನ ಸಂಘ ‘ಅನ್ವೇಷ್’ ಆಗಿದೆ” ಎಂದು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು.
ಬಳಿಕ ಶಾಲಾ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ವಿಜ್ಞಾನ ಮಾದರಿಗಳ ಪ್ರದರ್ಶನ ನಡೆಯಿತು. ವೇದಿಕೆಯಲ್ಲಿ ವಿಜ್ಞಾನ ಸಂಘದ ಸಂಯೋಜಕರಾದ ಸುಧಾ ಮತ್ತು ಪ್ರಿಯದರ್ಶಿನಿ ಉಪಸ್ಥಿತರಿದ್ದರು. ಶಾಲಾ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಹತ್ತನೇ ತರಗತಿಯ ವಿದ್ಯಾರ್ಥಿನಿ ಭುವಿ ಸ್ವಾಗತಿಸಿ, ಅನಿಷಾ ಆರ್ ವಂದಿಸಿ, ಸಹ ಶಿಕ್ಷಕಿ ಸಂಧ್ಯಾ ನಿರೂಪಿಸಿದರು.