ಮಾಂಟ್ರಾಡಿಯಲ್ಲಿ ಸಂಜೀವಿನಿ ಮಾಸಿಕ ಸಂತೆ : ಗೆರಟೆಯಿಂದ ತಯಾರಿಸಿದ ಅಲಂಕಾರಿಕ ವಸ್ತುಗಳ ಉದ್ಘಾಟನೆ – ಕಹಳೆ ನ್ಯೂಸ್
ಮೂಡುಬಿದಿರೆ: ಕೌಶಲ್ಯಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ದ.ಕ. ಮಂಗಳೂರು, ತಾ.ಪಂ.ಮೂಡುಬಿದಿರೆ, ಗ್ರಾ.ಪಂ.ನೆಲ್ಲಿಕಾರು, ಭ್ರಾಮರಿ ಮಹಿಳಾ ಸಂಜೀವಿನಿ ಗ್ರಾ.ಪಂ.ಮಟ್ಟದ ಒಕ್ಕೂಟ ನೆಲ್ಲಿಕಾರು ಇವುಗಳ ವತಿಯಿಂದ ಮಂಗಳವಾರ ಸಂಜೀವಿನಿ ಮಾಸಿಕ ಸಂತೆ ಮತ್ತು ಗೆರಟೆಯಿಂದ ತಯಾರಿಸಿದ ಅಲಂಕಾರಿಕ ವಸ್ತುಗಳ ಉದ್ಘಾಟನೆ ಪಂಚಾಯತ್ ಆವರಣದಲ್ಲಿ ನಡೆಯಿತು.
ಪಂಚಾಯತ್ ಉಪಾಧ್ಯಕ್ಷ ಶಶಿಧರ್ ಎಂ.ಉದ್ಘಾಟಿಸಿ ಮಾತನಾಡಿ ಸರಕಾರಗಳು ಮಹಿಳೆಯರ ಸಬಲೀಕರಣಕ್ಕಾಗಿ ಅವರಿಗೆ ತರಬೇತಿ ಮತ್ತು ಆರ್ಥಿಕ ಸೌಲಭ್ಯಗಳನ್ನು ಒದಗಿಸಿ ಮುಖ್ಯವಾಹಿಗೆ ತರುವಲ್ಲಿ ಶ್ರಮಿಸುತ್ತಿವೆ ಇದು ಆಶಾದಾಯಕ ಬೆಳವಣಿಗೆ. ಸಂಜೀವಿನಿ ಘಟಕದ ಯಾವುದೇ ಕಾರ್ಯಕ್ರಮಗಳಿಗೂ ಪಂಚಾಯತ್ ಸಹಕಾರ ನೀಡಲು ಸಿದ್ಧ ಎಂದು ಹೇಳಿದರು.
ಗ್ರಾ.ಪಂ.ಅಧ್ಯಕ್ಷೆ ಸುಶೀಲ ಅಧ್ಯಕ್ಷತೆಯನ್ನು ವಹಿಸಿದ್ದರು. ಎನ್ ಆರ್ ಎಲ್ ಎಂ ನ ತಾಲೂಕು ವ್ಯವಸ್ಥಾಪಕ ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಿ ಆಕೆ ಗ್ರಾಮದಲ್ಲಿ ಸ್ವಾವಲಂಬಿ ಮಹಿಳೆಯಾಗಿ ಬದುಕಬೇಕೆನ್ನು ಉದ್ದೇಶದಿಂದ ಸಂಜೀವಿನಿ ಸಂತೆ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಗೆರಟೆಯಿಂದ ತಯಾರಿಸಿದ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಿ ವಿವಿಧ ರೀತಿಯ ಚಟುವಟಿಕೆಗಳಿಗೆ ತೊಡಗಿಸಿಕೊಳ್ಳುವ ಮೂಲಕ ಉತ್ತಮವಾದ ಉದ್ಯಮವನ್ನಾಗಿ ರೂಪಿಸಬೇಕಾಗಿದೆ. ಆ ಮೂಲಕ ಭವಿಷ್ಯದಲ್ಲಿ ಈ ಉತ್ಪದನಾ ಗುಂಪುಗಳನ್ನು ಉತ್ಪಾದಕ ಫ್ಯಾಕ್ಟ್ರಿಗಳಾಗಿ ಮಾಡುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ ಎಂದರು.