ಉಡುಪಿ – ಕಾಸರಗೋಡು 400ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದ ಸರ್ವೆಗೆ ಆಗಮಿಸಿದ ತಂಡವನ್ನು ತಡೆದ ನಾಗರಿಕರು –ಕಹಳೆ ನ್ಯೂಸ್
ವಿಟ್ಲ ಕೇಪು ಗ್ರಾಮದ ಕೆಲವು ಭಾಗಗಳಿಗೆ ಉಡುಪಿ – ಕಾಸರಗೋಡು 400ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದ ಸರ್ವೆಗೆ ಅಗಮಿಸಿದ ಅಧಿಕಾರಿಗಳ ತಂಡವನ್ನು ಗ್ರಾಮಪಂಚಾಯತ್ ಸದಸ್ಯರು ಹಾಗೂ ಸ್ಥಳೀಯ ನಿವಾಸಿಗಳು ವಿರೋಧ ವ್ಯಕ್ತ ಪಡಿಸಿ ಹಿಂದಕ್ಕೆ ಕಳುಹಿಸಿದ ಘಟನೆ ನಡೆದಿದೆ.
ಬಂಟ್ವಾಳ ಹಾಗೂ ವಿಟ್ಲ ಭಾಗದ ಸುಮಾರು 100ರಷ್ಟು ರೈತರು ಈಗಾಗಲೇ ಜಿಲ್ಲಾಡಳಿತ ಮಾಹಿತಿ ನೀಡದೆ ರೈತರ ಭೂಮಿಯನ್ನು ಖಾಸಗೀ ಕಂಪನಿಗೆ ನೀಡಲು ಮುಂದಾಗಿರುವ ವಿಚಾರವನ್ನು ಪ್ರಶ್ನಿಸಿ ರಾಜ್ಯದ ಉಚ್ಛನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಯುತ್ತಿದ್ದು, ತಾತ್ಕಾಲಿಕ ತಡೆಯನ್ನು ನೀಡಿರುತ್ತಾರೆ. ಪ್ರಕರಣ ಇತ್ಯರ್ಥವಾಗುವ ಮೊದಲು ಕಂಪನಿ ಮಾರ್ಗ ರಚನೆಯನ್ನು ಮಾಡುದಿಲ್ಲ ಎಂದು ಹೇಳಿಕೊಂಡರು ಗುಪ್ತವಾಗಿ ಟವರ್ ನಿರ್ಮಾಣಕ್ಕೆ ಮುಂದಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ಈ ನಡುವೆ ಅಡ್ಯನಡ್ಕದ ಕೆಲವು ಖಾಸಗೀ ಜಾಗದಲ್ಲಿ ಟವರ್ ನಿರ್ಮಾಣಕ್ಕಾಗಿ ಮರಗಳ ತೆರವಿನ ವಿಚಾರದಲ್ಲಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಮೂಲಕ ಸರ್ವೇ ನಡೆಸಲು ಮುಂದಾಗಿದೆ. ಪಂಚಾಯಿತ್ ನಿಂದ ಈಗಾಗಲೇ ವಿದ್ಯುತ್ ಮಾರ್ಗ ರಚನೆಯ ವಿಚಾರವನ್ನು ವಿರೋಧಿಸಿ ಜಿಲ್ಲಾಡಳಿತಕ್ಕೆ ಪತ್ರವನ್ನು ನೀಡಿದ್ದು, ಪುಣಚ ಗ್ರಾಮ ಪಂಚಾಯತ್ ನ ಸದಸ್ಯರು ಹಾಗೂ ಸ್ಥಳೀಯ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.