ಕಾಂಗ್ರೆಸ್ ಸರ್ವಾಧಿಕಾರಿ ಧೋರಣೆ; ಬಿಜೆಪಿ ಶಾಸಕರ ಅಮಾನತು ರಾಜ್ಯದ ಇತಿಹಾಸದಲ್ಲೇ ಕಪ್ಪು ಚುಕ್ಕೆ: ಕುಯಿಲಾಡಿ – ಕಹಳೆ ನ್ಯೂಸ್
ಕಾಂಗ್ರೆಸ್ ದೇಶದೆಲ್ಲೆಡೆ ಕುಖ್ಯಾತರಾಗಿರುವ ಹಲವಾರು ಭ್ರಷ್ಟ ರಾಜಕೀಯ ಮುಖಂಡರನ್ನು ಬೆಂಗಳೂರಿಗೆ ಕರೆಸಿ ನಡೆಸಿರುವ ಸ್ವಯಂ ಸ್ವಾರ್ಥದ ರಾಜಕೀಯ ಸಮಾವೇಶಕ್ಕೆ ಸರಕಾರದ ಐಎಎಸ್ ಅಧಿಕಾರಿಗಳನ್ನು ನಿಯಮ ಬಾಹೀರವಾಗಿ ಬಳಸಿರುವ ಕ್ರಮದ ಕುರಿತು ವಿವರಣೆ ಕೇಳಿದ್ದ ಬಿಜೆಪಿಯ 10 ಶಾಸಕರನ್ನು ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ್ದಾರೆಂಬ ನೆಪವೊಡ್ಡಿ ಸರ್ವಾಧಿಕಾರಿ ಧೋರಣೆಯಿಂದ ಸದನದಿಂದ ಅಮಾನತುಗೊಳಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಹಾಗೂ ಈ ಬಾರಿಯ ಪ್ರಥಮ ಅಧಿವೇಶನದಲ್ಲೇ ನಡೆದ ಈ ಘಟನೆ ರಾಜ್ಯದ ಇತಿಹಾಸದಲ್ಲೇ ಕಪ್ಪು ಚುಕ್ಕೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ ಸದನದ ಬಾಗಿಲು ಒದ್ದಿದ್ದರು. ಡಿ.ಕೆ. ಶಿವಕುಮಾರ್ ಸದನದಲ್ಲೇ ಪೇಪರ್ ಹರಿದು ಹಾಕಿದ್ದರು. ಸದನದ ಇನ್ನೋರ್ವ ಸದಸ್ಯ ಸ್ಪೀಕರ್ ಮುಂದಿದ್ದ ಮೈಕ್ ಕಿತ್ತು ಹಾಕಿದ್ದರು. ಇಂತಹ ಹಲವಾರು ನಿದರ್ಶನಗಳು ಸದನದಲ್ಲಿ ಕಾಂಗ್ರೆಸ್ ಶಾಸಕರು ನಡೆಸಿದ್ದ ದುರ್ವತನೆಗೆ ಜ್ವಲಂತ ಸಾಕ್ಷಿಗಳಾಗಿದ್ದು ಸದನದ ಅಮಾನತಿಗೆ ಒಳಪಡದೇ ಇದ್ದರೂ, ಕಾಂಗ್ರೆಸ್ ಕೈಗೊಂಬೆಯAತಿರುವ ವಿಧಾನಸಭಾ ಸ್ಪೀಕರ್ ರವರಿಗೆ ಬಿಜೆಪಿಯ 10 ಶಾಸಕರ ವರ್ತನೆ ಮಾತ್ರ ಶಿಕ್ಷಾರ್ಹ ಅಪರಾಧ ಎಂದು ಕಂಡುಬAದಿರುವುದು ವಿಪರ್ಯಾಸ.
ಸರಕಾರೇತರ ರಾಜಕೀಯ ಕಾರ್ಯಕ್ರಮಕ್ಕೆ ಸರಕಾರದ ಉನ್ನತಾಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಶಿಷ್ಟಾಚಾರಕ್ಕೆ ತಿಲಾಂಜಲಿ ನೀಡಿದ ಸಿ.ಎಂ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ತನ್ನ ತಪ್ಪನ್ನು ಒಪ್ಪಿಕೊಳ್ಳದೆ ಸಮರ್ಥನೆ ಮಾಡಲು ಹೊರಟಿರುವುದು ಖಂಡನೀಯ. ಈ ಹಿಂದೆ ದುರಾಡಳಿತದಿಂದ ಅಧಿಕಾರ ಕಳೆದುಕೊಂಡು ಮೂಲೆಗುಂಪಾಗಿದ್ದ ಕಾಂಗ್ರೆಸ್, ಪ್ರಸಕ್ತ ರಾಜ್ಯದಲ್ಲಿ ನಕಲಿ ಗ್ಯಾರಂಟಿಗಳ ಮೂಲಕ ಜನತೆಯನ್ನು ವಂಚಿಸಿ ಅಧಿಕಾರಕ್ಕೆ ಬಂದ ಮಾತ್ರಕ್ಕೆ ಇಡೀ ದೇಶವನ್ನೇ ಗೆದ್ದಂತೆ ಭಾವಿಸಿ ದುರಹಂಕಾರ ಪ್ರವೃತ್ತಿಯಿಂದ ಸರ್ವಾಧಿಕಾರಿ ಧೋರಣೆ ತಳೆದಿರುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳಿಗೆ ಮಾಡಿರುವ ಅಪಮಾನವಾಗಿದೆ.
ರಾಜ್ಯದ ಆಡಳಿತ ಯಂತ್ರ ಕುಸಿದಿದೆ. ರೈತರ ಆತ್ಮಹತ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾಜ್ಯ ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಬಂದು ಬಂಧನಕ್ಕೊಳಗಾಗಿರುವ ಕಾಂಗ್ರೆಸ್ಸಿನ ಬ್ರದರ್ಸ್ ಬಗ್ಗೆ ರಾಜ್ಯ ಗೃಹ ಸಚಿವರು ಮೃದುವಾದ ಹೇಳಿಕೆ ನೀಡಿರುವುದು, ಸದನದಲ್ಲಿ ಬಿಜೆಪಿ ಶಾಸಕರ ಅಸಾಂವಿಧಾನಿಕ ಅಮಾನತು ಈ ಎಲ್ಲ ಪ್ರಕ್ರಿಯೆಗಳು ರಾಜ್ಯ ಕಾಂಗ್ರೆಸ್ ಸರಕಾರ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ಮಾಡುತ್ತಿರುವ ತಂತ್ರದ ಭಾಗವಾಗಿದೆ.
ರಾಜ್ಯದ ಜ್ವಲಂತ ಸಮಸ್ಯೆಗಳನ್ನು ನಿರ್ಲಕ್ಷಿಸಿರುವ ಕಾಂಗ್ರೆಸ್ ಸರಕಾರ ಪಂಚ ನಕಲಿ ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾರಿಗೊಳಿಸದೆ ಜನತೆಗೆ ಪಂಗನಾಮ ಹಾಕಿದೆ. ಬಿಜೆಪಿ ಸರಕಾರ ಜಾರಿಗೆ ತಂದಿರುವ ಅನೇಕ ಜನಪರ ಯೋಜನೆಗಳನ್ನು ಸ್ಥಗಿತಗೊಳಿಸುವ ಜೊತೆಗೆ ಕೇಂದ್ರ ಸರಕಾರದ ಕೃಷಿ ಸಮ್ಮಾನ್ ಯೋಜನೆಗೆ ರಾಜ್ಯದಿಂದ ನೀಡುತ್ತಿದ್ದ ರೂ.4,000/- ಮೊತ್ತವನ್ನೂ ಕಡಿತಗೊಳಿಸಿರುವ ರಾಜ್ಯ ಕಾಂಗ್ರೆಸ್ ಸರಕಾರ ಕೇವಲ ರಾಜಕೀಯ ಲಾಭದ ಲೆಕ್ಕಾಚಾರ ಮತ್ತು ಒಂದೇ ವರ್ಗದ ಓಲೈಕೆಯಲ್ಲಿ ತೊಡಗಿಕೊಂಡು ಜನವಿರೋಧಿ ನೀತಿ ಅನುಸರಿಸುತ್ತಿರುವುದು ಜಗಜ್ಜಾಹೀರಾಗಿದೆ.
ರಾಜ್ಯದ ಜನತೆಗೆ ಪ್ರಬುದ್ಧರಾಗಿದ್ದು ಪ್ರಚಲಿತ ವಿದ್ಯಮಾನಗಳನ್ನು ಅವಲೋಕಿಸಿ, ಕಾಂಗ್ರೆಸ್ಸಿನ ಸರ್ವಾಧಿಕಾರಿ ಧೋರಣೆ ಮತ್ತು ಜನವಿರೋಧಿ ನೀತಿಗೆ ಸೂಕ್ತ ಸಮಯದಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.