Friday, January 24, 2025
ಸುದ್ದಿ

ಅನಾಥವಾಗಿ ಪಾಳು ಬಿದ್ದಿದೆ ಉಜಿರಂಡಿ ಪಲ್ಕೆಯಲ್ಲಿರುವ ಹಾಸ್ಟೆಲ್ ಕಟ್ಟಡ – ಕಹಳೆ ನ್ಯೂಸ್

ಒಂದು ಕಾಲದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ವಸತಿಯ ಜತೆಗೆ ಅನ್ನವನ್ನೂ ನೀಡಿದ್ದ ಹಾಸ್ಟೆಲ್ ಕಟ್ಟಡವೊಂದು ಇದೀಗ ಅನಾಥವಾಗಿ ಪಾಳು ಬಿದ್ದು ವರ್ಷ ಕಳೆದಂತೆ ಶಿಥಿಲಾವಸ್ಥೆಗೆ ತಲುಪುತ್ತಿದ್ದು, ನಿವೇಶನ ಹಾಗೂ ಕಟ್ಟಡದ ಮಾಲಕತ್ವ ಹೊಂದಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಯಾವುದೇ ಸರಕಾರಿ ಇಲಾಖೆಯ ಬಳಕೆಗೆ ನೀಡಲು ಸಿದ್ಧವಿದ್ದರೂ ಯಾರೂ ಕೂಡ ಬಳಕೆಗೆ ಮುಂದೆ ಬಂದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು


ಇದು ಮಣಿನಾಲ್ಕೂರು ಗ್ರಾಮದ ಉಜಿರಂಡಿಪಲ್ಕೆಯಲ್ಲಿರುವ ಹಾಸ್ಟೆಲ್ ಕಟ್ಟಡದ ಸ್ಥಿತಿಯಾಗಿದೆ. ಸುಮಾರು 28 ವರ್ಷಗಳ ಇತಿಹಾಸ ಹೊಂದಿರುವ ಈ ಕಟ್ಟಡದಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ಬಾಲಕರ ಹಾಸ್ಟೆಲ್ ಕಾರ್ಯಾಸುತ್ತಿದ್ದು, ಅಲ್ಲಿನ ವಿದ್ಯಾರ್ಥಿಗಳು ಪಕ್ಕದಲ್ಲೇ ಇರುವ ಮಣಿನಾಲ್ಕೂರು ಸರಕಾರಿ ಪ್ರೌಢಶಾಲೆಗೆ ತೆರಳುತ್ತಿದ್ದರು. ಈ ವೇಳೆ ಜಿಲ್ಲೆಯ ವಿವಿಧ ಭಾಗಗಳ ವಿದ್ಯಾರ್ಥಿಗಳು ಈ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಪ್ರೌಢಶಾಲಾ ಶಿಕ್ಷಣ ಪಡೆದಿದ್ದರು.
ಆದರೆ ಮುಂದೆ ಹಲವೆಡೆ ಹೊಸ ಪ್ರೌಢಶಾಲೆಗಳು ಮಂಜೂರಾದ ಪರಿಣಾಮ ಈ ಹಾಸ್ಟೆಲ್‌ಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕುಸಿದು ಹಾಸ್ಟೆಲ್‌ನ್ನು ಅನಿವಾರ್ಯವಾಗಿ ಮುಚ್ಚಬೇಕಾದ ಸ್ಥಿತಿ ನಿರ್ಮಾಣವಾಯಿತು. ಸ್ವಲ್ಪ ವರ್ಷಗಳ ಕಾಲ ಮುಚ್ಚಿನ ಹಾಸ್ಟೆಲ್ ಕಟ್ಟಡದಲ್ಲಿ ಸುಮಾರು 7 ವರ್ಷಗಳ ಹಿಂದೆ ಬಂಟ್ವಾಳಕ್ಕೆ ಮಂಜೂರಾದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯವನ್ನು ನಡೆಸುವುದಕ್ಕೆ ಕಟ್ಟಡ ಸಿಗದ ಹಿನ್ನೆಲೆಯಲ್ಲಿ ಇದೇ ಕಟ್ಟಡದಲ್ಲಿ ನಡೆಸಲಾಯಿತು.
ಆದರೆ ಇಲ್ಲಿಂದ ವಿದ್ಯಾರ್ಥಿಗಳು ಸುಮಾರು 20 ಕಿ.ಮೀ. ದೂರದಲ್ಲಿರುವ ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್‌ಗೆ ಆಗಮಿಸಬೇಕಾಗಿದ್ದು, ಹೀಗಾಗಿ ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ಬರಲು ಹಿಂದೇಟು ಹಾಕುತ್ತಿದ್ದರು. ಈ ಕಾರಣದಿಂದ ಕೆಲವು ವರ್ಷಗಳ ಹಿಂದೆ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ತಲಪಾಡಿಯ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಹೀಗಾಗಿ ಈ ಕಟ್ಟಡ ಮತ್ತೆ ಹಾಗೇ ಪಾಳು ಬಿದ್ದ ಸ್ಥಿತಿಗೆ ಮುಂದುವರಿಯಿತು.
ಹೀಗೆ ಖಾಲಿ ಇರುವ ಹಾಸ್ಟೆಲ್ ಕಟ್ಟಡವನ್ನು ಬಳಸುವ ದೃಷ್ಟಿಯಿಂದ ಕಿಯೋನಿಕ್ಸ್ ಸಂಸ್ಥೆ ಹಿಂದುಳಿದ ವರ್ಗಗಳ ಇಲಾಖೆಯವರ ಬಳಿ ಕೇಳಿದ್ದು, ಇಲಾಖೆ ಕೂಡ ಅದಕ್ಕೆ ಒಪ್ಪಿಗೆಯನ್ನು ನೀಡಿತ್ತು. ಆದರೆ ಈ ಪ್ರಸ್ತಾಪ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಹಾಸ್ಟೆಲ್ ಖಾಲಿಯಾಗಿದ್ದು, ಯಾವುದೇ ನಿರ್ವಹಣೆ ಇಲ್ಲದೆ ವರ್ಷ ಕಳೆದಂತೆ ಶಿಥಿಲಾವಸ್ಥೆಗೆ ತಲುಪುತ್ತಿದೆ. ಕಳೆದ 2-3 ವರ್ಷಗಳ ಹಿಂದೆ ಕೊಂಚ ಸುಸ್ಥಿತಿಯಲ್ಲಿದ್ದ ಕಟ್ಟಡವನ್ನು ಯಾರಾದರೂ ಉಪಯೋಗಿಸುವಂತಿದ್ದರೆ ಇಲಾಖೆ ಒಪ್ಪಿಗೆ ನೀಡುತ್ತದೆ ಎಂದು ಅಧಿಕಾರಿ ಬಂಟ್ವಾಳ ತಹಶೀಲ್ದಾರ್ ಅವರ ಬಳಿ ಪ್ರಸ್ತಾಪ ಇಟ್ಟಿದ್ದರು.
ಪ್ರಸ್ತುತ ಈ ನಿವೇಶನವು ಹಳ್ಳಿ ಪ್ರದೇಶದಲ್ಲಿ ಇರುವುದರಿಂದ ಯಾವುದೇ ಇಲಾಖೆಗೆ ಬೇಡವಾಗಿದೆ. ನಗರ ಪ್ರದೇಶದಲ್ಲಿ ಇರುತ್ತಿದ್ದರೆ ಕಟ್ಟಡವನ್ನು ಪಡೆಯುವುದಕ್ಕೆ ಸ್ಪರ್ಧೆಯೇ ಇರುವ ಸಾಧ್ಯತೆ ಇತ್ತು. ಪ್ರಸ್ತುತ ಕಟ್ಟಡದ ಸುತ್ತಲೂ ಪೊದೆ ಬೆಳೆದುಕೊಂಡಿದ್ದು, ಇನ್ನೂ ಒಂದಷ್ಟು ವರ್ಷಗಳ ಕಾಲ ಹಾಗೇ ಬಿಟ್ಟರೆ ಕುಸಿದು ಬೀಳುವ ಸಾಧ್ಯತೆಯೂ ಇದೆ. ಹಾಸ್ಟೆಲ್ ಒಳ ಭಾಗದಲ್ಲಿ ಇದ್ದ ಬಹುತೇಕ ಸೊತ್ತುಗಳು ಈಗಾಗಲೇ ಕಳವಾಗಿ ಹೋಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂದಿನ ದಿನಗಳಲ್ಲಿ ಈ ಹಾಸ್ಟೆಲ್ ಕಟ್ಟಡವು ನಮ್ಮ ಇಲಾಖೆಗೆ ಉಪಯೋಗಕ್ಕೆ ಬರುವ ಸಾಧ್ಯತೆ ಕಡಿಮೆ ಇರುವುದರಿಂದ ಸ್ಥಳೀಯ ಶಾಲೆ ಆಥವಾ ಯಾವುದೇ ಸರಕಾರಿ ಇಲಾಖೆಗೆ ನೀಡಲು ನಮ್ಮ ಇಲಾಖೆ ಸಿದ್ಧವಿದೆ. ಕಳೆದ 3 ವರ್ಷಗಳ ಹಿಂದೆಯೇ ನಾವು ಈ ಕುರಿತು ಅಂದಿನ ತಹಶೀಲ್ದಾರ್ ಬಳಿ ಪ್ರಸ್ತಾಪ ಇಟ್ಟಿದ್ದೆವು. ಈಗಾಲೂ ಇಲಾಖೆಯವರು ಕೇಳಿದರೆ ಮೇಲಾಧಿಕಾರಿಗಳಿಂದ ಅನುಮತಿ ಪಡೆದು ನೀಡಲು ಸಿದ್ಧರಿದ್ದೇವೆ.