ಬಂಟ್ವಾಳ: ಕರ್ನಾಟಕ ಸರಕಾರ ಗ್ರಾಮ ಪಂಚಾಯತ್‍ಗಳ ವಾರ್ಷಿಕ ಪ್ರಗತಿಯನ್ನು ಆಧರಿಸಿಕೊಂಡು ಕೊಡುವ ಸಾಂಸ್ಥಿಕ ಮತ್ತು ಪ್ರಗತಿ ಸೂಚ್ಯಂಕಗಳ ಆಧಾರದ ಮೇಲೆ 2017-18ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮ ಪಂಚಾಯತ್ ಆಯ್ಕೆಯಾಗಿದೆ.
ರಾಜ್ಯದ 30 ಜಿಲ್ಲೆಗಳ 176 ತಾಲೂಕುಗಳಲ್ಲಿ ತಲಾ ಮೂರು ಗ್ರಾಮ ಪಂಚಾಯತ್‍ಗಳನ್ನು ಆಯ್ಕೆ ಮಾಡಿ ಅವುಗಳಲ್ಲಿ ಒಂದು ಗ್ರಾಮ ಪಂಚಾಯತ್‍ನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತೆ. ಈ ಬಾರಿಯೂ ಬಂಟ್ವಾಳ ತಾಲೂಕಿನ ಇರಾ, ಕೊಳ್ನಾಡು, ಮತ್ತು ಬಾಳ್ತಿಲ ಗ್ರಾಮ ಪಂಚಾಯತ್‍ಗಳು ಆಯ್ಕೆಯಾಗಿ ಮಾನದಂಡದಂತೆ ಅಂತಿಮವಾಗಿ 150 ಅಂಕಗಳ ಪ್ರಶ್ನಾಂಕಗಳ ಆಧಾರದ ಮೇಲೆ ಬಾಳ್ತಿಲ ಗ್ರಾಮ ಪಂಚಾಯತ್ ಪ್ರಶಸ್ತಿ ಪಡೆದುಕೊಂಡಿದೆ.
ಈ ವರ್ಷದಲ್ಲಿ ಪಂಚಾಯತ್ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಹಾಗೂ ಅನುದಾನ ಬಳಕೆಗೆ ಸಂದ ಗೌರವವಾಗಿದೆ. 17-18 ಸಾಲಿನಲ್ಲಿ ಎಸ್‍ಸಿ ಎಸ್‍ಟಿ ಅನುದಾನವನ್ನು ಆದ್ಯತೆಯ ನೆಲೆಯಲ್ಲಿ ಅತೀ ಹೆಚ್ಚು ಬಳಸಲಾಗಿದೆ.ಶೇಕಡಾ 100ರಷ್ಟು ಶೌಚಾಲಯ, ಗ್ರಾಮದಲ್ಲಿ ಅಡುಗೆ ಅನಿಲ ವಿತರಣೆ, ಅನುದಾನ ಬಳಕೆ, ಹಾಗೂ ಸ್ವಚ್ಛತೆಯಲ್ಲಿ ವಿಶೇಷವಾದ ಸಾಧನೆಗೈದ ಬಾಳ್ತಿಲ ಗಾಂಪಂಚಾಯತ್ ಅರ್ಹಗೊಂಡಿದ್ದು ಗಾಂದಿಜಯಂತಿಯಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯತ್ ಅದ್ಯಕ್ಷ ವಿಠಲ ಹಾಗೂ ಪಂಚಾಯತ್ ಅಧಿಕಾರಿಗಳು ಪ್ರಶಸ್ತಿ ಸ್ವೀಕರಿಸಿದರು.