ಮೂಡುಬಿದಿರೆ: ತುಳುಕೂಟ ಬೆದ್ರ ಇದರ ವತಿಯಿಂದ ಆಟಿಡೊಂಜಿ ಕೂಟ ಕಾರ್ಯಕ್ರಮವು ಸ್ಕೌಟ್ಸ್- ಗೈಡ್ಸ್ ಕನ್ನಡ ಭವನದ ರತ್ನಾಕರವರ್ಣಿ ಸಭಾಭವನದಲ್ಲಿ ನಡೆಯಿತು.
ಉದ್ಯಮಿ ರಾಜೇಂದ್ರ ಕುಮಾರ್ ಜೈನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅಕ್ಕಿ ಪವಿತ್ರವಾದುದು ಅದರಲ್ಲಿ ನಮ್ಮ ಬದುಕಿದೆ ಆದರೆ ಮದುವೆ ಸಮಾರಂಭಗಳಲ್ಲಿ ಕೆಲವರು ಚಪ್ಪಲಿ ಹಾಕಿಕೊಂಡು ಅಕ್ಕಿಯನ್ನು ತುಳಿದು ಅಕ್ಷತೆಯನ್ನು ಹಾಕುತ್ತಿದ್ದಾರೆ ಇದರ ಬಗ್ಗೆ ಜಾಗೃತಿಯನ್ನು ಮೂಡಿಸಬೇಕಾಗಿದೆ ಹಾಗೂ ವಿಧಾನ ಸಭೆಯಲ್ಲಿ ತುಳುವಿನಲ್ಲಿ ಮಾತನಾಡುವಾಗ ಕನ್ನಡಿಗರು ಲಘುವಾಗಿ ಪರಿಗಣಿಸುತ್ತಾರೆ ಆದ್ದರಿಂದ ಕನ್ನಡದಷ್ಟೇ ತುಳು ಭಾಷೆಯು ಕೂಡಾ ಶ್ರೇಷ್ಠವಾದುದು ಎಂಬುದನ್ನು ತುಳುವರು ತೋರಿಸಿಕೊಡಬೇಕಾಗಿದೆ ಎಂದರು.
ತುಳುಕೂಟ ಬೆದ್ರ(ರಿ.)ನ ಅಧ್ಯಕ್ಷ ಧನಕೀರ್ತಿ ಬಲಿಪ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ಆಟಿ ಆಚರಣೆಯ ಬಗ್ಗೆ ಉಪನ್ಯಾಸ ನೀಡಿ ಹಿಂದೆ ಆಟಿ ತಿಂಗಳಿನಲ್ಲಿ ಹಸಿವನ್ನು ನೀಗಿಸುವ ಬಗೆ ಹೇಗೆಂದು ಮತ್ತು ಬದುಕು ನಡೆಸುವ ಬಗ್ಗೆ ಅನಿವಾರ್ಯವಿತ್ತು ಆದರೆ ಈಗ ಅದು ಸಂಸ್ಕೃತಿ ಮತ್ತು ಆರೋಗ್ಯದ ವಿಚಾರವಾಗಿ ಬದಲಾಗಿದೆ.
ಆಧುನಿಕತೆಯ ಭರಾಟೆಯಲ್ಲಿ ನಾವು ಪರಂಪರೆಯ ವಿಚಾರಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಬದಲಾದ ಕಾಲದಲ್ಲಿ ಮುಡಿಕಟ್ಟುವ ಅವಶ್ಯಕತೆ ಇಲ್ಲ ಹಾಗೆಂದು ಈ ಕಲೆಗಳು ನಾಶವಾಗದಂತೆ ಸ್ಪರ್ಧೆಗಳ ಮೂಲಕವಾದರೂ ಮುಂದಿನ ಜನಾಂಗಕ್ಕೆ ತಿಳಿಸಿಕೊಡಬೇಕಾಗಿದೆ. ಅಂದು ಬಡತನವಿದ್ದರೂ ಸಮೃದ್ಧಿಯ ಮನಸ್ಸು ಇತ್ತು ಈಗ ಎಲ್ಲವನ್ನೂ ವಸ್ತು ಮತ್ತು ಹಣದಿಂದ ಅಳೆಯುವ ಕಾಲವಾಗಿದೆ ಎಂದ ಅವರು ಹಿಂದಿನ ಕಾಲದಂತೆ ಬಾಯಿ ತುಂಬಾ ಮಾತು ಮುಖ ತುಂಬಾ ನಗು ಸಂತೋಷ ಮತ್ತೆ ಮರುಕಳಿಸಬೇಕಾಗಿದೆ ಎಂದರು.
ಕೂಟದ ಕೋಶಾಧಿಕಾರಿ ಸುಭಾಶ್ಚಂದ್ರ ಚೌಟ ಉಪಸ್ಥಿತರಿದ್ದರು. ತುಳುಕೂಟದ ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ ಸ್ವಾಗತಿಸಿದರು. ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿದರು. ಜಯಂತಿ ಎಸ್. ಬಂಗೇರಾ ಪ್ರಾರ್ಥಿಸಿದರು. ತುಳುಕೂಟದ ಸ್ಥಾಪಕಾಧ್ಯಕ್ಷ ಚಂದ್ರಹಾಸ ದೇವಾಡಿಗ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ “ನಮ್ಮ ಕಲಾವಿದೆರ್ ಬೆದ್ರ” ಇವರಿಂದ ತೆಲಿಕೆದ ಗೊಂಚಿಲ್ ಪ್ರದರ್ಶನಗೊಂಡಿತು.