Tuesday, November 26, 2024
ದಕ್ಷಿಣ ಕನ್ನಡಬಂಟ್ವಾಳ

ಬಂಟ್ವಾಳದ ಮಾರಿ ಬೊಲ್ಲಕ್ಕೆ ತುಂಬಿತು ನೂರು ವರ್ಷ… : ನೆನಪುಗಳನ್ನ ಹಂಚಿಕೊoಡ ಹಿರಿ ಜೀವಗಳು –ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳದ ಮಾರಿ ಬೊಲ್ಲಕ್ಕೆ ತುಂಬಿತು ನೂರು ವರ್ಷ… ನೂರರ ನೆಂಪುಗಳ ಬಗ್ಗೆ ಬಂಟ್ವಾಳ ಪೇಟೆ ತುಂಬಾ ಮಾತನಾಡಿಕೊಳ್ಳುತ್ತಿದ್ದಾರೆ. ಅ ದಿನಗಳಲ್ಲಿ ಬಂದಿರುವ ಬೊಲ್ಲದ ಸಾಕ್ಷಿಗಳು ಕೆಲವು ಗೋಡೆಗಳಲ್ಲಿ ಇನ್ನೂ ಅಚ್ಚಳಿಯದೆ ಉಳಿದಿವೆ. ಬ್ರಿಟಿಷ್ ಆಡಳಿತದ 1923 ರ ವರ್ಷ …ಅಂದಿನ ನೈಜ ಘಟನೆಗಳಿಗೆ ಸಾಕ್ಷಿಯಾಗಿ ನೆನಪುಗಳನ್ನು ಮರುಕಳಿಸಲು ನಮ್ಮ ಜೊತೆ ಯಾರೂ ಉಳಿದಿಲ್ಲ. ಆದರೆ ಘಟನೆಗಳ ಬಗ್ಗೆ ಕಥೆಯ ರೀತಿಯಲ್ಲಿ ಕೇಳಿದ ಕೆಲವು ಹಿರಿಯರು ಘಟನೆಗಳನ್ನು ಹಂಚಿಕೊAಡಿದ್ದಾರೆ. ಅದರಲ್ಲಿ ಯಾವುದು ಸತ್ಯ ಎಂಬುದಕ್ಕೆ ನಮ್ಮಲ್ಲಿ ಸಾಕ್ಷಿಗಳಿಲ್ಲ.ಆದರೆ ಮನೆಮಠ,ಪ್ರಾಣಿ ಪಕ್ಷಿಗಳ ಸಹಿತ ಬೆಲೆಬಾಳುವ ವಸ್ತುಗಳ ಜೊತೆ ಅನೇಕ ಜೀವಹಾನಿಯಾಗಿದೆ ಎಂಬುದರ ಬಗ್ಗೆ ತಿಳಿಸುತ್ತಾರೆ. ಬಂಟ್ವಾಳ ಪೇಟೆಯಲ್ಲಿ ಮಾರಿಬೊಲ್ಲದ ಸಾಕ್ಷಿಯಾಗಿ ಒಂದು ಮನೆಯ ಗೋಡೆಯಲ್ಲಿ ಬರೆದ ಗೋಡೆ ಬರಹ ಇನ್ನೂ ಕೂಡ ಅಚ್ಚಳಿಯದೆ ಉಳಿದಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಒಡೆತನದಲ್ಲಿರುವ ಮನೆಯೊಂದರ ಗೊಡೆಯಲ್ಲಿ 7.8.1923 ಬಗ್ಗೆ ಬರೆದು ಅಷ್ಟು ಎತ್ತರಕ್ಕೆ ನೆರೆ ಬಂದಿರುವುದಕ್ಕೆ ಕಪ್ಪು ಗುರುತು ಹಾಕಿದ್ದಾರೆ. ಮನೆಯ ಅಡಿಪಾಯದಿಂದ ಸುಮಾರು 15 ಅಡಿಯಷ್ಟು ಮೇಲೆ ನೆರೆ ಬಂದಿರುವ ಉಲ್ಲೇಖವಿದೆ. ಹಂಚಿನ ಅಡಿ ಭಾಗದ ಗೋಡೆ ಸಂಪೂರ್ಣ ನೆರೆಯಿಂದ ಆವೃತವಾಗಿರುವ ಬಗ್ಗೆ ಈ ಬರಹ ಸಾಕ್ಷಿ ನೀಡುತ್ತದೆ. ಅದು ಹಳೆಯ ಮಣ್ಣಿನ ಗೋಡೆಯಾಗಿದ್ದು, ಈಗಲೂ ಅದೇ ಮಾದರಿಯಲ್ಲಿ ಹಂಚಿನ ಮನೆಯಾಗಿದೆ. ಸ್ಥಳೀಯರೋರ್ವರು ತಿಳಿಸುವ ಪ್ರಕಾರ ಇದು ಬ್ರಿಟಿಷ್ ಕಾಲದ ಶಾಲೆಯಾಗಿದೆ ಎಂದು ಹೇಳುತ್ತಾರೆ. ಬಂಟ್ವಾಳದಲ್ಲಿ ಇದು ಸಾಕ್ಷಿಯಾದರೆ ಪಾಣೆಮಂಗಳೂರಿನಲ್ಲಿ ಮತ್ತೊಂದು ಸಾಕ್ಷಿ ದೊರಕಿದೆ ಪಾಣೆಮಂಗಳೂರು ಪೇಟೆಯಲ್ಲಿ ಮೂರು ಮಾರ್ಗದ ಮಧ್ಯೆ ಹಳೆಯ ಕಾಲದ ಜನತಾ ಹೋಟೆಲ್ ಒಂದಿದ್ದು ಸರಿಯಾಗಿ ಅದರ ಮುಂಭಾಗದ ಕಟ್ಟಡದಲ್ಲಿ ಇನ್ನೊಂದು ಗೋಡೆ ಬರಹ ದೊರಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸುಮಾರು ನಾಲ್ಕು ಅಡಿ ಎತ್ತರದಲ್ಲಿ ಕಲ್ಲಿನಲ್ಲಿ ಕೆತ್ತಿದ ಬರಹವೊಂದಿದೆ. ತಾ. 7.8.1923 ಕುಜವಾರ ಈ ಕಲ್ಲಿನ ತನಕ ನೆರೆ ಬಂದಿದೆ ಎಂದು ಬರೆದ ಸಾಕ್ಷಿ ಇನ್ನೂ ಉಳಿಸಿಕೊಂಡು ಬಂದಿದ್ದಾರೆ. ಈ ಮಾರಿ ಬೊಲ್ಲದ ಸಂದರ್ಭದಲ್ಲಿ ಪಾಣೆಮಂಗಳೂರಿನ ಕೇಶವ ಕುಡ್ವ ಅವರ ಕುಟುಂಬವನ್ನು ಬಚಾವ್ ಮಾಡಿದ್ದು ದೋಣಿಯ(ಒಡದ) ತಿಮ್ಮಪ್ಪ ಎಂದು ಅವರ ಮೊಮ್ಮಗ ಪ್ರಸ್ತುತ ಬೆಂಗಳೂರಿನಲ್ಲಿ ಅರ್ಥಿಕ ಸಲಹೆಗಾರರಾಗಿರುವ ನಾರಾಯಣ ಕುಡ್ವ ಅವರು ಅವರ ಅಜ್ಜ ಹೇಳಿದ ಘಟನೆಯನ್ನು ವಿವರಿಸುತ್ತಾರೆ.

ಒಂದು ದೋಣಿಯಲ್ಲಿ 13 ಜನ ಮಕ್ಕಳು ಸೇರಿದಂತೆ 20ಕ್ಕೂ ಅಧಿಕ ಜನರನ್ನು ರಕ್ಷಣೆ ಮಾಡಿದ್ದಾರೆ . ಪಾಣೆಮಂಗಳೂರಿನ ಎತ್ತರದ ಪ್ರದೇಶ ಉಪ್ಪುಗುಡ್ಡೆಗೆ ನಮ್ಮನ್ನು ಸ್ಥಳಾಂತರ ಮಾಡಿದ್ದಾರೆ ಎಂದು ಅವರು ಹೇಳಿದ ಘಟನೆಯ ಬಗ್ಗೆ ಮಾಹಿತಿ ನೀಡಿದರು. ಅಂದು ಏನಾಯಿತು ಎಂದರೆ ರಾತ್ರಿ ಸುಮಾರು ಎರಡು ಗಂಟೆ ವೇಳೆ ಹಟ್ಟಿಯಲ್ಲಿದ್ದ ದನ ಜೋರಾಗಿ ಕೂಗುತ್ತಿತ್ತು ಆದಕ್ಕೆ ಹೋಗಿ ನೋಡುವಾಗ ಮನೆಯ ಮೆಟ್ಟಿಲುವರೆಗೆ ನೀರು ಬಂದಿತ್ತು. ಏನು ತೋಚದೆ ಹಟ್ಟಿಯಲ್ಲಿ ದನಕರುಗಳನ್ನು ಹಗ್ಗ ಬಿಚ್ಚಿ ಬಿಡಲಾಯಿತು. ಬಳಿಕ ಮನೆಯವರನ್ನು ಎಬ್ಬಿಸಿ ಎಲ್ಲಿ ಹೋಗುವುದು ಎಂದು ದಿಕ್ಕು ತೋಚದಾದಗ ನೀರಿನ ನಡುವೆ ಚಿಮಿಣಿ ದೀಪದಲ್ಲಿ ದೋಣಿ ಬರುವುದು ಕಂಡಿತು. ನೋಡುವಾಗ ಒಡದ ತಿಮ್ಮಪ್ಪ ಬಂದಿದ್ದರು. ಅ ದಿನ ನೆರೆಯಿಂದ ನಮ್ಮನ್ನು ದೇವರಂತೆ ಕಾಪಾಡಿದ್ದಾನೆ ಎಂದು ಘಟನೆಯ ಬಗ್ಗೆ ಕೇಳಿದ ಕಥೆಯನ್ನು ವಿವರಿಸಿದರು.

ಅ ಸಮಯದ ಭೀಕರ ಮಾರಿ ಬೊಲ್ಲವನ್ನು ನೋಡಿ ಭಯಬೀತರಾಗಿ ಬಂಟ್ವಾಳ ಮತ್ತು ಪಾಣೆಮಂಗಳೂರಿನ ಅನೇಕ ಕುಟುಂಬಗಳು ಮಂಗಳೂರು ಸಹಿತ ಅನೇಕ ಕಡೆಗಳಿಗೆ ಗುಳೆ ಹೋಗಿದ್ದಾರೆ ಎಂಬ ವಿಚಾರವನ್ನು ತಿಳಿಸುತ್ತಾರೆ. 1914ರಲ್ಲಿ ಪಾಣೆಮಂಗಳೂರು ಸೇತುವೆ ನಿರ್ಮಾಣದ ಬಳಿಕ ಪಾಣೆಮಂಗಳೂರು ಪೇಟೆ ಬಂಟ್ವಾಳ ಪೇಟೆಗಿಂತಲೂ ವ್ಯವಹಾರದಲ್ಲಿ ಬಹಳ ಅಭಿವೃದ್ಧಿ ಹೆಜ್ಜೆ ಇಟ್ಟಿತ್ತು ಎಂದು ಅವರು ಹೇಳುತ್ತಾರೆ.

ಮಾರಿಬೊಲ್ಲ ಬಂದು ನೂರು ವರುಷದ ಹಿನ್ನೆಲೆಯಲ್ಲಿ ಮತ್ತೆ ಅ ದಿನದ ಘಟನೆಗಳನ್ನು ಕೇಳಿ ತಿಳಿದುಕೊಂಡ ಒಂದಷ್ಟು ಹಿರಿಯರು ಜೊತೆಯಾಗಿ ಕೂಟವೊಂದನ್ನು ಏರ್ಪಾಡು ಮಾಡುವ ಯೋಜನೆ ಮಾಡಿದ್ದಾರೆ. ಅಗಸ್ಟ್ 7 2023ರಂದು ಪ್ರಸ್ತುತ ಕಲ್ಲಿನ ಮೂಲಕ ದಾಖಲೆಯನ್ನು ಹೊಂದಿರುವ ಪಾಣೆಮಂಗಳೂರು ಕಟ್ಟಡದಲ್ಲಿ ಹಿರಿಯರು ಸೇರುವ ಯೋಚನೆ ಮಾಡಿದ್ದಾರೆ.

ಎಸ್.ವಿ.ಎಸ್.ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೋ. ತುಕರಾಮ ಪೂಜಾರಿ ಅವರ ಜೊತೆ ಈ ಮಾರಿ ಬೊಲ್ಲದ ಬಗ್ಗೆ ಮಾತನಾಡಿಸಿದಾಗ, ಕೇಳಿ ತಿಳಿದುಕೊಂಡಿರುವ ಮತ್ತು ಅಜ್ಜಿ ಮನೆಯ ದೃಷ್ಟಾಂತವನ್ನು ನಮ್ಮ ಮುಂದೆ ತೆರೆದಿಟ್ಟರು. ಜೊತೆಯಲ್ಲಿ ಕಡೇಶಿವಾಲಯ ದೇವಾಲಯದ ರಥೋತ್ಸವ ನಡೆಯುವ ರಥ ಇದೇ ಮಾರಿ ಬೊಲ್ಲದಲ್ಲಿ ಕೊಚ್ಚಿ ಬಂದಿತ್ತು, ಅದು ಬ್ರಿಟಿಷ್ ರ ಕಾಲದಲ್ಲಿ ಅಂದರೆ 1914 ರಲ್ಲಿ ನಿರ್ಮಾಣವಾದ ಪಾಣೆಮಂಗಳೂರು ಹಳೆಯ ಉಕ್ಕಿನ ಸೇತುವೆಯಲ್ಲಿ ಸಿಲುಕಿಕೊಂಡಿತ್ತು ಎಂದು ಹಿರಿಯ ಹೇಳಿದ ಘಟನೆಯ ಬಗ್ಗೆ ಒಂದಷ್ಟು ಮಾಹಿತಿ ನೀಡಿದರು. 1923 ರ ನಂತರ 1974 ಬಂದಿರುವ ಬೊಲ್ಲದ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದೆ. ಆದರೆ1923 ರ ಬೊಲ್ಲದ ಘಟನೆಗಳ ಬಗ್ಗೆ ಕೇಳಿ ತಿಳಿದ ನನಗೆ 1974 ನೆರೆ ಏನೂ ಅಲ್ಲ ಎಂದು ಅಂದುಕೊAಡೆ. ಅದರ ಬಳಿಕ ಬಂಟ್ವಾಳದಲ್ಲಿ ಬೊಲ್ಲ ಬಂದಿಲ್ಲ. ಆದರೆ ಪ್ರಸ್ತುತ ದಿನಗಳ ಮಳೆ ಅದು ಅ ಕಾಲಕ್ಕೆ ಹೋಲಿಸಿದರೆ ದೊಡ್ಡ ಮಳೆಯೇ ಅಲ್ಲ.. ಸೂರ್ಯನನ್ನು ಬಿಸಿಲನ್ನು ನೋಡದ, ಮನೆಯಿಂದ ಹೊರನಡೆಯದ ಅನೇಕ ದಿನಗಳಿತ್ತು ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಈಗಿನ ನೆರೆ ಏನಿದ್ದರೂ ಪಕೃತಿ ವಿರುದ್ದವಾದ ಮಾನವನ ನಡವಳಿಕೆಯ ಕಾರಣ ನೀರು ಹರಿದು ಹೋಗಲು ದಾರಿಯಿಲ್ಲದೆ ನೀರು ತಗ್ಗು ಪ್ರದೇಶಗಳಿಗೆ ತುಂಬುತ್ತದೆ.ಇದು ಬೊಲ್ಲ ಅಲ್ಲ ಎಂದು ಅವರು ಅತ್ಯಂತ ಸ್ಪಷ್ಟವಾಗಿ ತಿಳಿಸುತ್ತಾರೆ. ಮಾನವನ ಆಸೆಗೂ ಮಿತಿಯಿರಬೇಕು ಅತಿಯಾದ ಆಸೆ ದುಖಃಕ್ಕೆ ಮೂಲವಾಗುತ್ತದೆ ಎಂಬುದು ಅವರ ಮಾತಿನ ತಾತ್ಪರ್ಯ ಅಂತ ಕಾಣುತ್ತೆ.
ಅಮ್ಮುಂಜೆ ಮೊಯಿದ್ದೀನ್ ಜುಮಾ ಮಸೀದಿ ಮುಳುಗಿದ ಬಗ್ಗೆ ಹಿರಿಯರು ಹೇಳುತ್ತಾರೆ ಮತ್ತು ನೀರು ಎಷ್ಟು ಎತ್ತರಕ್ಕೆ ಬಂದಿದೆ ಎಂಬುದರ ಬಗ್ಗೆ ಲಿಖಿತ ದಾಖಲೆ ರೂಪದಲ್ಲಿ ಮರದ ತುಂಡಿನಲ್ಲಿ ಕೆತ್ತನೆ ಮಾಡಿದ್ದಾರೆ ಎಂದು ಇಲ್ಲಿನ ನಿವಾಸಿ ಜೆಡಿಎಸ್ ಮುಖಂಡ ಅಬುಬಕ್ಕರ್ ಅಮ್ಮುಂಜೆ ತಿಳಿಸಿದ್ದಾರೆ.

1923 ರ ಬೊಲ್ಲದ ಸಂದರ್ಭದಲ್ಲಿ ನಿತ್ಯಾನಂದ ಸ್ವಾಮಿಯವರು ಬಂಟ್ವಾಳದ ಪೇಟೆಯ ಬಡ್ಡಕಟ್ಟೆಯಲ್ಲಿ ಧ್ಯಾನ ಮಾಡುತ್ತಿದ್ದರು ಎಂಬ ಬಗ್ಗೆ ಪುಸ್ತಕವೊಂದರಲ್ಲಿ ಬರೆದಿದ್ದಾರೆ. ಏನೇ ಇರಲಿ ಮುಂದಿನ ತಿಂಗಳ ಅಗಸ್ಟ್ 7 – 2023 ರಂದು ಬಂಟ್ವಾಳದ ಮಾರಿ ಬೊಲ್ಲಕ್ಕೆ ನೂರು ವರುಷ ತುಂಬಲಿದೆ. ಮತ್ತೆ ಹಳೆಯ ನೆನಪುಗಳ ಬಗ್ಗೆ ಮೆಲುಕು ಹಾಕುವ ಜನಗಳನ್ನು ಕಂಡಿದ್ದೇವೆ. ಹಳೆಯ ನೆನಪುಗಳು ನೆನಪಾಗಿ ಉಳಿಯಲಿ, ಮತ್ತೆ ನೆರೆಯ ಅನುಭವ ಆಗುವುದು ಬೇಡ ಎಂಬುದೇ ಎಲ್ಲರ ಹರಕೆ..