ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಿಜಕ್ಕೂ ಆಗಿದ್ದೇನು? ಪ್ರತಿಭಟನೆಯಲ್ಲಿ ಕೆಲ ಅಂಶಗಳನ್ನು ಬಿಚ್ಚಿಟ್ಟ ವಿದ್ಯಾರ್ಥಿನಿ -ಕಹಳೆ ನ್ಯೂಸ್
ಉಡುಪಿ : ಉಡುಪಿಯ ಖಾಸಗಿ ನರ್ಸಿಂಗ್ ಕಾಲೇಜಿನ ಶೌಚಾಲಯದಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು, ಹಿಂದು ವಿದ್ಯಾರ್ಥಿನಿಯ ವೀಡಿಯೋ ಚಿತ್ರೀಕರಿಸಿರುವ ಬಗ್ಗೆ ಪ್ರಕರಣ ದಾಖಲಾದ ಬೆನ್ನಲ್ಲೆ ಎಬಿವಿಪಿ ಗುರುವಾರ ನಗರದ ಅಜ್ಜರಕಾಡು ಹುತಾತ್ಮ ಸ್ಮಾರಕ ಭವನದ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿ, ಆರಂಭದಲ್ಲಿ ಪ್ರಕರಣದ ದಿಕ್ಕು ತಪ್ಪಿಸಿದ ಮಲ್ಪೆ ವೃತ್ತನೀರಿಕ್ಷಕರನ್ನು ಅಮಾನತುಗೊಳಿಸಿ, ತನಿಖಾಧಿಕಾರಿಯನ್ನು ಬದಲಾಯಿಸಬೇಕೆಂದು ಆಗ್ರಹಿಸಿದರು.
ಗುರುವಾರ ಬೆಳಗ್ಗೆಯೇ ನೂರಾರು ವಿದ್ಯಾರ್ಥಿಗಳು ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೇ ಪೋಲಿಸ್ ವಿಳಂಬ ನೀತಿ, ರಾಜ್ಯ ಸರಕಾರದ ಜಾಣ ಮೌನವನ್ನು ಪ್ರಶ್ನಿಸಿ ಪ್ರತಿಭಟಿಸಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ ಮತ್ತು ತನಿಖಾಧಿಕಾರಿಯವರು ಸ್ಥಳಕ್ಕೆ ಬರಬೇಕೆಂದು ಪಟ್ಟುಹಿಡಿದರು. ಪ್ರತಿಭಟನಾ ಸ್ಥಳದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸುಮಾರು 200 ಕ್ಕೂ ಹೆಚ್ಚು ಪೋಲಿಸರು, ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ, ಉಡುಪಿ ಡಿವೈಎಸ್ಪಿ ದಿನಕರ್, ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಸೇರಿದಂತೆ ಪಿ.ಎಸ್.ಐ ಗಳ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೋಲಿಸರ ಜೊತೆ ತಳ್ಳಾಟ ನಡೆದು, ಎಬಿವಿಪಿ ಕಾರ್ಯಕರ್ತರು ವಿದ್ಯಾರ್ಥಿಗಳ ಮೇಲೆ ಪೋಲಿಸರು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದರು.ಪೋಲಿಸ್ ಹಾಗು ಎಬಿವಿಪಿಯ ವಿದ್ಯಾರ್ಥಿಗಳ ಜೊತೆ ವಾಗ್ವಾದ ನಡೆದು, ಪೋಲಿಸರು ಲಾಠಿ ಚಾರ್ಚ್ ಮಾಡಲು ಮುಂದಾದಗ, ಶಾಸಕ ಯಶ್ಪಾಲ್ ಸುವರ್ಣ ಸ್ಥಳಕ್ಕೆ ಆಗಮಿಸಿ, ಪೋಲಿಸರಿಗೆ ಲಾಠಿ ಚಾರ್ಚ್ ಮಾಡದಂತೆ ಎಚ್ಚರಿಕೆ ನೀಡಿದರು.
ವಿದ್ಯಾರ್ಥಿಗಳ ಪಟ್ಟಿಗೆ ಮಣಿದ ಎಸ್ಪಿ ಅಕ್ಷಯ್ ಹಾಕೆ ಮಚ್ಚೀಂದ್ರ ಸ್ಥಳಕ್ಕೆ ಆಗಮಿಸಿ, ಸುಮಾರು 20 ನಿಮಿಷ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿ, ಬೇಡಿಕೆಯನ್ನು ಈಡೇರಿಸುವ ಭರವಸೆಯನ್ನು ನೀಡಿದರು. ತನಿಖಾಧಿಕಾರಿಯನ್ನು ಈಗಾಗಲೇ ಬದಲಾವಣೆ ಮಾಡಿದ್ದು, ವಿಶೇಷ ತಂಡವನ್ನು ರಚಿಸಲಾಗಿದೆ. ಆರಂಭಿಕ ತನಿಖಾಧಿಕಾರಿಯನ್ನು ಅಮಾನತು ಮಾಡುವ ಬಗ್ಗೆ ಪರಿಶೀಲಿಸಿ, ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಈಗಾಗಲೇ ವಶಕ್ಕೆ ಪಡೆದ ಮೊಬೈಲ್ ಗಳನ್ನು ಎಫ್.ಎಸ್.ಎಲ್ ಗೆ ಕಳುಹಿಸಲಾಗಿದ್ದು, ಪ್ರಕರಣದ ತನಿಖೆಯ ವೇಳೆ ಮತ್ತಷ್ಟು ಮೊಬೈಲ್ ಗಳು ಪತ್ತೆಯಾದಲ್ಲಿ ಅವುಗಳನ್ನೂ ಎಫ್.ಎಸ್.ಎಲ್ ಗೆ ಕಳುಹಿಸುತ್ತೇನೆ ಎಂದರು.
ಸ್ಥಳಕ್ಕೆ ಆಗಮಿಸಿದ ಎಸ್ಪಿಯನ್ನು ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡು, ಶೌಚಾಲಯದಲ್ಲಿ ವಿಡಿಯೋ ಮಾಡುವುದೇ ತಪ್ಪು, ಅಂತಹದರಲ್ಲಿ ತಮಾಷೆಗಾಗಿ ವಿಡಿಯೋ ಮಾಡಿದ್ದಾರೆ ಎನ್ನುವುದು ಎಷ್ಟು ಸರಿ. ನಾವೆಲ್ಲಾ ಜೋಕರ್ ಹ…..ತಮಾಷೆಗಾಗಿ ಶೌಚಾಲಯದಲ್ಲಿ ಯಾರು ವಿಡಿಯೋ ಮಾಡುತ್ತಾರೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಎಸ್ಪಿ, ಹೆಚ್ಚಿನ ಮೊಬೈಲ್ ಗಳು ಬಳಕೆಯಾಗಿದೆಯೇ ಎಂದು ಖುದ್ದು, ನಾನೇ ತನಿಖೆ ಮಾಡುತ್ತೇನೆ ಎಂದು ಉತ್ತರಿಸಿದರು.
ನಮ್ಮ ಕಾಲೇಜಿನ ಆಡಳಿತಾಧಿಕಾರಿ ಅಬ್ದುಲ್ ಖಾದರ್, ತಪ್ಪು ಮಾಡಿದ ಮೂವರು ವಿದ್ಯಾರ್ಥಿನಿಯರು ಹೊರಗೆ ನಿಂತಿದ್ದರು. ಅವರಿಗೆ ನಾನು ಬ್ಯೂಟಿಫುಲ್ ಆ್ಯಕ್ಷನ್ ತೆಗೆದುಕೊಂಡಿದ್ದು, ಐದು ಸಲ ಬರೆಯುವಂತೆ ಇಂಪೋಸಿಶನ್ ನೀಡಿದ್ದೇನೆ. ಅವರು ಗಮ್ಮತಿಗೆ ಅದನ್ನು ಮಾಡಿದರಂತೆ ಬಿಟ್ಟು ಬಿಡಿ ಎಂದು ತಿಳಿಸಿದ್ದರು ಎಂದು ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ತಮ್ಮ ಅಭಿಪ್ರಾಯ ತಿಳಿದ್ದಾರೆ.