ಬೆಳಗಾವಿ: ಬೆಳಗಾವಿಯ ಸವಿತಾ ಮತ್ತು ಬಾಗಲಕೋಟೆಯ ಚೈತ್ರಾ ಕುಲಕರ್ಣಿ ಎಂಬ ಇಬ್ಬರು ಹೆಣ್ಣುಮಕ್ಕಳು 26-27ರ ಕಿರು ವಯಸ್ಸಿನಲ್ಲೇ ನ್ಯಾಯಾಧೀಶರಾಗಿ ಆಯ್ಕೆಯಾಗಿ ಹೆಮ್ಮೆ ಪಡಬೇಕಾದ ಸಾಧನೆ ಮಾಡಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ನ್ಯಾಯಾಂಗ ಇಲಾಖೆಯ ಸೇವೆಗೆ ಸೇರುತ್ತಿರುವ ಈ ಹೆಣ್ಣುಮಕ್ಕಳು ತಮ್ಮ ವೃತ್ತಿ ಜೀವನದಲ್ಲಿ ಯಶಸ್ವಿಯಾಗಿ, ಹಂತ-ಹಂತವಾಗಿ ಎತ್ತರಕ್ಕೇರುತ್ತ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮಟ್ಟದವರೆಗೂ ತಲುಪಲಿ ಎಂದು ಹಾರೈಸೋಣ.
ನ್ಯಾಯಾಂಗ ಇಲಾಖೆಯಲ್ಲಿ ಕಾನೂನು ಸೇವಾ ವೃತ್ತಿಯ ಎರಡು ಕವಲುಗಳು ‘ಬಾರ್’ (ವಕೀಲರು) ಮತ್ತು ‘ಬೆಂಚ್’ (ನ್ಯಾಯಾಧೀಶರು). ನ್ಯಾಯಾಧೀಶರು ಮತ್ತು ವಕೀಲರು ಇಬ್ಬರೂ ನ್ಯಾಯಾಲಯದ ಅಧಿಕಾರಿಗಳೆಂದು ಪರಿಗಣನೆ. ಹೊಸದಾಗಿ ಕಾನೂನು ಪದವಿ ಪಡೆದವರು ವಕೀಲರಾಗಿ ಕೆಲವು ವರ್ಷ ಸೇವೆ ಸಲ್ಲಿಸಿ, ಸಾಕಷ್ಟು ಅನುಭವ ಗಳಿಸಿದ ಮೇಲೆ ನ್ಯಾಯಾಧೀಶರಾಗುತ್ತಿದ್ದುದು ವಾಡಿಕೆ. ವಕೀಲಿ ವೃತ್ತಿ ಸ್ವತಂತ್ರವಾದುದು, ಸಮಾಜದಲ್ಲಿ ಸಾಕಷ್ಟು ಗೌರವಕ್ಕೆ ಪಾತ್ರವಾದುದು ಇತ್ಯಾದಿ ಕಾರಣಕ್ಕೆ ಕಾನೂನು ಪದವಿ ಗಳಿಸಿದವರ ಮೊದಲ ಆಯ್ಕೆ ಅದು.
ಅದರಲ್ಲಿ ಯಶಸ್ವಿಯಾಗಲು ಸತತ ಅಧ್ಯಯನ, ಬಹು ಚಾಣಾಕ್ಷತನ, ಕಠಿಣ ಪರಿಶ್ರಮ ಮತ್ತು ಸ್ವಲ್ಪ ಅದೃಷ್ಟ ಇವೆಲ್ಲ ಬೇಕೆಂಬುದರಿಂದ ಯಶಸ್ಸು ಕಠಿಣ ಮತ್ತು ಅನಿಶ್ಚಿತ. ಹಾಗಿದ್ದೂ ನ್ಯಾಯಾಧೀಶರಾದರೆ ಆ ವೃತ್ತಿಯ ಬಹು ಮುಖ್ಯ ಮಿತಿಯಾದ, ಸಮಾಜದಲ್ಲಿ ಮುಕ್ತವಾಗಿ ವ್ಯವಹರಿಸುವಂತಿಲ್ಲ, ಬೆರೆಯುವಂತಿಲ್ಲ ಎಂಬ ಕಾರಣಕ್ಕೆ ಅದು ಎರಡನೇ ಆಯ್ಕೆ. ಎಷ್ಟರ ಮಟ್ಟಿಗೆಂದರೆ, ಕೆಲವೇ ವರ್ಷಗಳ ಹಿಂದೆ ‘ಬೆಂಚ್’ಗೆ ಬರುವವರು ‘ಬಾರ್’ನಲ್ಲಿ ಅಷ್ಟೇನೂ ಯಶಸ್ವಿಯಾಗದವರು ಎಂಬ ಅಪಖ್ಯಾತಿಯೇ ಇತ್ತು! ಇದ್ದಿದ್ದರಲ್ಲಿ ಈ ಅಪಖ್ಯಾತಿ ಅಧೀನ ನ್ಯಾಯಾಲಯಗಳಿಗಷ್ಟೇ ಸೀಮಿತವಾಗಿತ್ತು. ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳಿಗೆ ಹಾಗಿರಲಿಲ್ಲ.
ವಕೀಲರಾಗಿ ಬಹಳ ಯಶಸ್ವಿಯಾದ ಹಲವರು ನೇರವಾಗಿ ಹೈಕೋರ್ಟುಗಳು ಮತ್ತು ಸುಪ್ರೀಂ ಕೋರ್ಟಿಗೆ ನ್ಯಾಯಾಧೀಶರಾಗಿ ನೇಮಕವಾಗಿ ಅಲ್ಲಿಯೂ ತಮ್ಮ ಅಳಿಸಲಾಗದ ಗುರುತು ಮೂಡಿಸಿದವರಿದ್ದಾರೆ. ಪ್ರಸ್ತುತ ಸುಪ್ರೀಂ ಕೋರ್ಟಿನ ನ್ಯಾಯಾಧೀಶರಲ್ಲಿ ಒಬ್ಬರಾದ ನ್ಯಾ.ಇಂದು ಮಲ್ಹೋತ್ರ ಹಾಗೆ ನೇರವಾಗಿ ನೇಮಕವಾದವರು.
ವಕೀಲಿ ವೃತ್ತಿಯಲ್ಲಿ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಧೀನ ನ್ಯಾಯಾಲಯಗಳ ನ್ಯಾಯಾಧೀಶರಲ್ಲೂ ಸಾಕಷ್ಟು ಮಹಿಳೆಯರು ಇದ್ದಾರೆ. ಆದರೆ, ಹೈಕೋರ್ಟುಗಳು ಮತ್ತ ಸುಪ್ರೀಂ ಕೋರ್ಟಿನಲ್ಲಿ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ ಇಂದೂ ಬಹು ಕಡಿಮೆಯಿದೆ. ಸುಪ್ರೀಂ ಕೋರ್ಟ್ ಪ್ರಾರಂಭವಾದಂದಿನಿಂದ ಇದುವರೆಗೆ ಸೇವೆ ಸಲ್ಲಿಸಿದ, ಸಲ್ಲಿಸುತ್ತಿರುವ ಒಟ್ಟು ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ 8. ಸುಪ್ರೀಂ ಕೋರ್ಟಿಗೆ ಪ್ರಥಮ ಮಹಿಳಾ ನ್ಯಾಯಮೂರ್ತಿಗಳು ನೇಮಕವಾದದ್ದು 1989ರಲ್ಲಿ, ಅವರು ನ್ಯಾ. ಫಾತಿಮಾ ಬೀವಿ.
ಪ್ರಸ್ತುತ ಸುಪ್ರೀಂ ಕೋರ್ಟಿನಲ್ಲಿರುವ ಒಟ್ಟು 25 ನ್ಯಾಯಮೂರ್ತಿಗಳಿದ್ದು ಅವರಲ್ಲಿ ಮೂವರು ಮಹಿಳೆಯರಿದ್ದಾರೆ: ನ್ಯಾ. ಆರ್. ಭಾನುಮತಿ, ನ್ಯಾ. ಇಂದು ಮಲ್ಹೋತ್ರಾ ಮತ್ತು ನ್ಯಾ. ಇಂದಿರಾ ಬ್ಯಾನರ್ಜಿ. ಸುಪ್ರೀಂ ಕೋರ್ಟಿನಲ್ಲಿ ಹೀಗೆ ಒಟ್ಟಿಗೇ ಮೂವರು ಮಹಿಳಾ ನ್ಯಾಯಮೂರ್ತಿಗಳಿರುವುದು ಒಂದು ಸಾರ್ವಕಾಲಿಕ ದಾಖಲೆ! ಇದುವರೆಗೆ ಭಾರತದ ಮುಖ್ಯ ನ್ಯಾಯಮೂರ್ತಿಯ ಸ್ಥಾನವನ್ನು ಯಾವುದೇ ಮಹಿಳೆ ಅಲಂಕರಿಸಿಲ್ಲ.
ಈಗ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಯುವಕರು, ಯುವತಿಯರು ತಮ್ಮ ವೃತ್ತಿ ಜೀವನದ ಆರಂಭದಲ್ಲೇ ನ್ಯಾಯಾಧೀಶರಾಗಲು ಬಯಸುತ್ತಿದ್ದಾರೆ, ಸಂಬಂಧ ಪಟ್ಟ ಆಯ್ಕೆಯ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ, ಯಶಸ್ವಿಯೂ ಆಗುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಅಲ್ಲಿ ಸಲ್ಲದವರು ಇಲ್ಲಿಗೆ ಬಂದರು ಎಂಬುದಕ್ಕಿಂತ ಇದನ್ನೇ ಬಯಸಿ ಆಯ್ಕೆ ಮಾಡಿಕೊಂಡವರು ಯಶಸ್ವಿಯಾಗಬಲ್ಲರು ಮತ್ತು ವೃತ್ತಿಯ ಘನತೆ-ಗೌರವವನ್ನು ಎತ್ತಿಹಿಡಿಯಬಲ್ಲರೆಂದು ನಿರೀಕ್ಷಿಸಬಹುದು.
ಸವಿತಾ ಮತ್ತು ಚೈತ್ರಾ ಹಾಗೆ ಯಶಸ್ಸು ಗಳಿಸಲಿ. ಇಂತಹ ಪ್ರತಿಭಾವಂತರ ಸಂಖ್ಯೆ ಬೆಳೆಯಲಿ. ಉನ್ನತ ನ್ಯಾಯಾಲಯಗಳಲ್ಲಿನ ಮಹಿಳಾ ಪ್ರಾತಿನಿಧ್ಯದ ಕೊರತೆಯನ್ನು ನೀಗಿಸಲಿ. ಬಹು ಬೇಗ ಭಾರತದ ಸರ್ವೋಚ್ಚ ನ್ಯಾಯಮೂರ್ತಿಯ ಸ್ಥಾನದಲ್ಲಿ ಮಹಿಳೆಯೊಬ್ಬರನ್ನು ಕಾಣುವಂತಾಗಲಿ.