Friday, September 20, 2024
ಸುದ್ದಿ

ವಿಶ್ವಸಂಸ್ಥೆಯ ಚಾಂಪಿಯನ್ಸ್ ಆಫ್ ದ ಅರ್ಥ್ ಪ್ರಶಸ್ತಿ ಸ್ವೀಕರಿಸಿದ ಮೋದಿ – ಕಹಳೆ ನ್ಯೂಸ್

ನವದೆಹಲಿ: ವಿಶ್ವಸಂಸ್ಥೆಯ ಪರಿಸರ ವಿಭಾಗ ನೀಡುವ ಚಾಂಪಿಯನ್ಸ್ ಆಫ್ ದ ಅರ್ಥ್ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಸ್ವೀಕರಿಸಿದರು. ದೆಹಲಿಯಲ್ಲಿ ಆಯೋಜನೆಗೊಂಡಿದ್ದ ವಿಶೇಷ ಸಮಾರಂಭದಲ್ಲಿ ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರೆಸ್ ಈ ಪ್ರಶಸ್ತಿ ಪ್ರದಾನ ಮಾಡಿದರು.

ಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆ ಪರಿಣಾಮಗಳನ್ನು ತಡೆಗಟ್ಟಲು ದೂರದೃಷ್ಟಿ ನಿಲುವು ತಳೆದಿರುವ ಕಾರಣ ಪ್ರಧಾನಿ ಮೋದಿ ಅವರಿಗೆ ವಿಶ್ವಸಂಸ್ಥೆಯ ಈ ಪ್ರಶಸ್ತಿ ಲಭಿಸಿದೆ. ಅಂತಾರಾಷ್ಟ್ರೀಯ ಸೌರ ಮಹಾಒಕ್ಕೂಟ (ಐಎಸ್​ಎ) ರಚನೆಯಲ್ಲಿ ಮೋದಿ ಪ್ರಮುಖ ಪಾತ್ರ ವಹಿಸಿದ್ದರು. 2022ರ ವೇಳೆಗೆ ಭಾರತದಲ್ಲಿ ಒಮ್ಮೆ ಬಳಸಬಹುದಾದ ಪ್ಲಾಸ್ಟಿಕ್​ನ್ನು ಸಂಪೂರ್ಣ ನಿಷೇಧಿಸುವುದಾಗಿ ಪ್ರಧಾನಿ ಘೋಷಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಧಾನಿ, ಹವಾಮಾನ ವೈಪರೀತ್ಯ ನಿಯಂತ್ರಿಸಲು ಶ್ರಮಿಸುತ್ತಿರುವ ಅಸಂಖ್ಯಾತ ಭಾರತೀಯರು, ವಿಶೇಷವಾಗಿ ರೈತ ಸಮುದಾಯದವರಿಗೆ ಈ ಪ್ರಶಸ್ತಿಯನ್ನು ಸಮರ್ಪಿಸುತ್ತಿರುವುದಾಗಿ ಹೇಳಿದರು. ಹವಾಮಾನ ಮತ್ತು ವಿಪತ್ತು ನಮ್ಮ ಸಂಸ್ಕೃತಿಯೊಂದಿಗೆ ತಳಕು ಹಾಕಿಕೊಂಡಿವೆ. ನಮ್ಮೆಲ್ಲ ಆಚರಣೆಗಳಲ್ಲಿ ಈ ಅಂಶಗಳು ಸ್ಪಷ್ಟವಾಗಿವೆ ಎಂದರು.

ಜಾಹೀರಾತು

ನ್ಯೂಯಾರ್ಕ್​ನಲ್ಲಿ ಸೆ. 26ರಂದು ನಡೆದ ವಿಶ್ವಸಂಸ್ಥೆಯ 73ನೇ ಮಹಾಧಿವೇಶನದಲ್ಲಿ ಅಂತಾರಾಷ್ಟ್ರೀಯ ಸೌರ ಮಹಾಒಕ್ಕೂಟ ರೂಪಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರಾನ್ ಅವರಿಗೆ ಜಂಟಿಯಾಗಿ ಚಾಂಪಿಯನ್ಸ್ ಆಫ್ ದ ಅರ್ಥ್ ಅವಾರ್ಡ್ ಘೋಷಿಸಲಾಗಿತ್ತು.

ಹವಾಮಾನ ಬದಲಾವಣೆಯಿಂದಾಗಿ ಮಾನವನ ಅಸ್ತಿತ್ವಕ್ಕೆ ಒದಗಬಹುದಾದ ಆಪತ್ತಿನ ಅರಿವು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗಿದೆ. ಇಂತಹ ವಿಪತ್ತನ್ನು ನಿವಾರಿಸುವ ಮಾಗೋಪಾಯವೂ ಅವರಿಗೆ ತಿಳಿದಿದೆ. ಸೂಕ್ತ ಕಾರ್ಯಯೋಜನೆ ರೂಪಿಸಿ ಅವುಗಳನ್ನು ಅನುಷ್ಠಾನಗೊಳಿಸುವ ಮೂಲಕ ವಿಶ್ವದ ಇತರೆ ನಾಯಕರಿಗಿಂತ ಅವರು ಭಿನ್ನವಾಗಿ ನಿಲ್ಲುತ್ತಾರೆ.

ಅಂಟೋನಿಯೋ ಗುಟೆರೆಸ್ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ