ಕೋಟ: ಬ್ರಹ್ಮಾವರ ತಾಲೂಕಿನ ಕೋಟ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿಂತ ಲಾರಿಯಾ ಹಿಂಬದಿಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಗಾಯಗೊಂಡ ಬೈಕ್ ಸವಾರರು ತೆಕ್ಕಟ್ಟೆ ಗ್ರಾಮದ ಮಲ್ಯಾಡಿ ನಿವಾಸಿಗಳಾದ ಶಾಂತರಾಮ್ ಶೆಟ್ಟಿ ಹಾಗೂ ಅವರ ಪತ್ನಿ ಜಯಶ್ರೀ ಎಂದು ತಿಳಿದು ಬಂದಿದೆ. ಮಂಗಳೂರಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಲಾರಿಯು ಕೋಟದ ರಾಷ್ಟ್ರೀಯ ಹೆದ್ದಾರಿ 66 ರ ಫ್ಲೈ ಓವರ್ ನಲ್ಲಿ ಯಾವುದೇ ಸೂಚನೆ ನೀಡದೆ ಹಠಾತ್ತನೆ ನಿಂತಿದ್ದ ದ್ದರಿಂದ ಆ ಲಾರಿ ಹಿಂದೆ ಬರುತ್ತಿದ್ದ ಬೈಕ್ ಸವಾರನು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿರುತ್ತಾರೆ.
ಡಿಕ್ಕಿಯ ರಭಸಕ್ಕೆ ಬೈಕ್ ಚಲಾಯಿಸುತ್ತಿದ್ದ ಶಾಂತರಾಮ ಶೆಟ್ಟಿ ಕಾಲಿಗೆ ಹಾಗೂ ಸೊಂಟಕ್ಕೆ ಗಂಭೀರ ಗಾಯವಾಗಿದ್ದು ಸಹಸವಾರೆ ಪತ್ನಿ ಜಯಶ್ರೀಗೆ ಕೂಡ ಮುಖ ಮತ್ತು ಕೈ ಕಾಲಿಗೆ ಗಂಭೀರ ಗಾಯಗಳಾಗಿವೆ. ಇಬ್ಬರನ್ನೂ ತಕ್ಷಣ ಕೋಟ ಜೀವನ್ ಮಿತ್ರ ನಾಗರಾಜ್ ಪುತ್ರನ್ ಆಂಬುಲೆನ್ಸ್ ನಲ್ಲಿ ಮಣಿಪಾಲ ಆಸ್ಪತ್ರೆಗೆ ಸಾಗಿಸಿದ್ದಾರೆ. ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೋಟ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಘನ ವಾಹನಗಳವರು ನಡುರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿಕೊಂಡು ರಿಪೇರಿ ಇತ್ಯಾದಿಗಳನ್ನು ನಡೆಯಿಸುವುದು ಸಾಮಾನ್ಯವಾಗಿದ್ದು, ಇದು ಅಪಘಾತಗಳಿಗೆ ಎಡೆ ಮಾಡುತ್ತಿದೆ. ಹೀಗೆ ಹೆದ್ದಾರಿಯಲ್ಲಿ ನಿಂತ ವಾಹನಗಳಿಗೆ ಹಿಂಬದಿ ಅಪಾಯ ಸೂಚನೆಯ ಕೆಂಪು ದೀಪಗಳೂ ಇರುವುದಿಲ್ಲ. ಬೆಳಕು ಕಡಿಮೆ ಇರುವ ವೇಳೆಯಲ್ಲಿ, ಮಳೆ ಬರುವಾಗ ಹೆದ್ದಾರಿಯಲ್ಲಿ ಸಂಚರಿಸುವ ಇತರ ವಾಹನಗಳ ಚಾಲಕರಿಗೆ ಇವು ದೂರದಿಂದ ಕಾಣಿಸದೆ ಗಲಿಬಿಲಿ ಉಂಟಾಗುತ್ತಿದೆ. ಇನ್ನು ಕೆಲವು ವೇಳೆ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನಗಳು ಮಧ್ಯೆಯೇ ಯಾವುದೇ ಸೂಚನೆ ನೀಡದೇ ಹಠಾತ್ತನೆ ನಿಲ್ಲುವುದರಿಂದಲೂ ಅಪಘಾತಗಳು ಹೆಚ್ಚಿವೆ. ಕೋಟ ಬಸ್ ಸ್ಟ್ಯಾಂಡಿನಲ್ಲಿ ನಿಂತು ಮುಂದುವರಿಯುವ ಬಸ್ಸುಗಳು ಸರ್ವಿಸ್ ರಸ್ತೆ ಬಳಸದೇ ಹೆದ್ದಾರಿಯಲ್ಲಿಯೇ ನಿಂತು ಪ್ರಯಾಣಿಕರನ್ನು ಹತ್ತಿಳಿಸುವುದೂ ಇಲ್ಲಿ ಅಪಘಾತಗಳಿಗೆ ಕಾರಣವಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರಿಗೆ ಆಗ್ರಹಿಸಿದ್ದಾರೆ.