Sunday, November 24, 2024
ಸುದ್ದಿ

ಇಳಂತಿಲ ಗ್ರಾ.ಪಂ ಅಧ್ಯಕ್ಷರಾಗಿ ತಿಮ್ಮಪ್ಪ ಗೌಡ, ಉಪಾಧ್ಯಕ್ಷರಾಗಿ ಸವಿತಾ ಎಚ್ ಆಯ್ಕೆ –ಕಹಳೆ ನ್ಯೂಸ್

ಇಳಂತಿಲ: ಇಳಂತಿಲ ಗ್ರಾ.ಪಂ.ನ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ನಡೆದು ಬಿಜೆಪಿ ಬೆಂಬಲಿತ ಸದಸ್ಯ ತಿಮ್ಮಪ್ಪ ಗೌಡ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷೆಯಾಗಿ ಸವಿತಾ ಎಚ್‌. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಅಚ್ಚರಿಯ ಬೆಳವಣಿಗೆಯಲ್ಲಿ, ಕಾಂಗ್ರೆಸ್ ಬೆಂಬಲಿತ ಏಕೈಕ ಸದಸ್ಯರಾಗಿದ್ದ ಈಸುಬು ಅವರು ನಾಲ್ಕು ಮತಗಳನ್ನು ಪಡೆದು ಸೋಲೊಪ್ಪಿಕೊಂಡಿದ್ದಾರೆ.ಚುನಾವಣೆ ಫಲಿತಾಂಶದ ಬಳಿಕ, ಅಧ್ಯಕ್ಷ ಪದವಿ ಆಕಾಂಕ್ಷಿಯಾಗಿದ್ದುಕೊಂಡು, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾವಣೆಯಲ್ಲಿ ಸೋತ ಬಿಜೆಪಿ ಬೆಂಬಲಿತ ಸದಸ್ಯ ವಸಂತ ಶೆಟ್ಟಿ ಹಾಗೂ ಇನ್ನೋರ್ವ ಬಿಜೆಪಿ ಬೆಂಬಲಿತ ಸದಸ್ಯ ವಿಜಯಕುಮಾರ್ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಘಟನೆಯೂ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಳಂತಿಲ ಗ್ರಾ.ಪಂ.ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಪುರುಷ ಮೀಸಲಾತಿಯಿದ್ದರೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಎ)ಗೆ ಮೀಸಲಾಗಿತ್ತು. ಇಲ್ಲಿ ಒಟ್ಟು 14 ಸದಸ್ಯ ಬಲವಿದ್ದು, ಅದರಲ್ಲಿ 12 ಮಂದಿ ಬಿಜೆಪಿ ಬೆಂಬಲಿತ ಸದಸ್ಯರು, ಎಸ್. ಡಿಪಿಐ ಬೆಂಬಲಿತ ಸದಸ್ಯೆ ಒಬ್ಬರು ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರು ಒಬ್ಬರು ಇದ್ದರು. ಆ.7ರಂದು ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯರಾದ ತಿಮ್ಮಪ್ಪ ಗೌಡ ಅಧಿಕೃತ ಅಭ್ಯರ್ಥಿಯಾಗಿ, ವಸಂತ ಶೆಟ್ಟಿ ಬಂಡಾಯ ಅಭ್ಯರ್ಥಿಯಾಗಿ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯ ಈಸುಬು ಅವರು ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯೆ ಸವಿತಾ ಎಚ್‌. ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವರು ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ತಿಮ್ಮಪ್ಪ ಗೌಡ 7 ಮತಗಳನ್ನು ಪಡೆದರೆ, ವಸಂತ ಶೆಟ್ಟಿ 3 ಹಾಗೂ ಈಸುಬು ಅವರು 4 ಮತಗಳನ್ನು ಪಡೆದರು.

ಫಲಿತಾಂಶದ ಬಳಿಕ ಬಂಡಾಯ ಅಭ್ಯರ್ಥಿ ಬಿಜೆಪಿ ಬೆಂಬಲಿತ ಸದಸ್ಯ ವಸಂತ ಶೆಟ್ಟಿ ಹಾಗೂ ಬಿಜೆಪಿ ಬೆಂಬಲಿತ ಇನ್ನೋರ್ವ ಸದಸ್ಯ ವಿಜಯಕುಮಾರ್ ಅವರು ತಮ್ಮ ಪಂಚಾಯತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಗ್ರಾ.ಪಂ. ನಿಕಟಪೂರ್ವಾಧ್ಯಕ್ಷ ಚಂದ್ರಿಕಾ ಭಟ್ ಇದನ್ನು ಸ್ಪಷ್ಟಪಡಿಸಿದ್ದಾರೆ.

ಮೆಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶಿವಶಂಕ‌ರ ಚುನಾವಣಾಧಿಕಾರಿಯಾಗಿ ಹಾಗೂ ಉಪ ಚುನಾವಣಾಧಿಕಾರಿಯಾಗಿ ಇಳಂತಿಲ ಗ್ರಾ.ಪಂ. ಪಿಡಿಒ ಚೆನ್ನಪ್ಪ ನಾಯ್ಕ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.