ವ್ಯಾಪಾರ ಪರವಾನಿಗೆ ಪಡೆಲು ಹೊಸ ನಿಯಮಗಳು ಅಡಿಯಾಗುತ್ತಿರುವುದರಿಂದ ಹೊಸ ವ್ಯಾಪಾರ ಉದ್ದಿಮೆ ನಡೆಸಲು, ಬ್ಯಾಂಕ್ ಸಾಲ ಪಡೆಯಲು ಕಷ್ಟವಾಗುತ್ತಿದೆ. ಪಂಚಾಯಿತಿಗೂ ಆದಾಯ ನಷ್ಟ. 2012 ಮೊದಲೇ ಇರುವ ಕಟ್ಟಡಗಳಿಗೆ ಈ ಹೊಸ ನಿಯಮಗಳಿಂದ ವಿನಾಯಿತಿ ಕೊಡಬೇಕು. ಆ ಬಳಿಕದ ಹೊಸ ಕಟ್ಟಡಗಳಿಗೆ ನಿಯಮ ಪಾಲನೆ ಮಾಡುವಂತಾಗಬೇಕು.
ಇದು ಇಡೀ ರಾಜ್ಯದಲ್ಲಿ ಜಾರಿಗೆ ಬರುವಂತೆ ಪಿಡಿಒಗಳ ಸರ್ಕಾರದ ಗಮನಕ್ಕೆ ತರಬೇಕು ಎಂದು ಎಪಿಎಂಸಿ ಮಾಜಿ ಸದಸ್ಯ ವಾಸುದೇವ ನಾಯಕ್ ಮಂಗಳವಾರ ನಡೆದ ಪುತ್ತಿಗೆ ಗ್ರಾಮಸಭೆಯಲ್ಲಿ ಪ್ರಸ್ತಾಪಿಸಿದರು.
ಹಂಡೇಲಿನಲ್ಲಿ ಸಿಮೆಂಟ್ ಮಿಕ್ಸಿಂಗ್ ಘಟಕ ಶೇ.90ರಷ್ಟು ಆಗಿದೆ. ಇದು ಪರಿಸರಕ್ಕೆ ತೀವ್ರ ಹಾನಿ ಉಂಟು ಮಾಡುತ್ತದೆ. ಇದಕ್ಕೆ ತಡೆಯೊಡ್ಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಸರ್ಕಾರಿ ಜಾಗ ಅತಿಕ್ರಮಣವಾಗಿದ್ದಲ್ಲಿ ಮಾತ್ರ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಡುವುದಿಲ್ಲ. ಊರಿನವರ ದೂರನ್ನು ಮುಂದೆ ಅವರು ಉದ್ಯಮ ಪರವಾನಿಗೆ ಕೇಳುವಾಗ ಗ್ರಾಮಸ್ಥರ ಆಕ್ಷೇಪಗಳನ್ನು ಪರಿಶೀಲಿಸುತ್ತೇವೆ. ಎಂದು ಪಿಡಿಒ ಭೀಮಾ ನಾಯ್ಕ್ ಉತ್ತರಿಸಿದರು. ಅಕ್ರಮವಾಗಿದ್ದಲ್ಲಿ ಸಾಬೀತುಪಡಿಸಲು ಎಷ್ಟುದಿನ ಬೇಕು ಎಂದು ಪ್ರಶ್ನಿಸಿದರು.
ಪಡಿತರ ಚೀಟಿ ಅವ್ಯವಸ್ಥೆಯಿಂದಾಗಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ ತೊಂದರೆಯಾಗುತ್ತಿದೆ. ಪಿಡಿಒ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಕೆಂಪು ಕಲ್ಲಿನ ಕ್ವಾರಿಗಳು ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಾಚರಿಸುತ್ತಿದ್ದು, ರಸ್ತೆಗಳು ತೀವ್ರ ಹದಗೆಟ್ಟಿವೆ. ಅವರಣ ಬೇಲಿ ಇಲ್ಲದೇ ಇರುವುದರಿಂದ ಅಪಾಯಕಾರಿ ಸನ್ನಿವೇಶವಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಕಡಲಕೆರೆ ಬಳಿ ಪುರಸಭೆ ಹಾಗೂ ಪುತ್ತಿಗೆ ಗ್ರಾಪಂ ಗಡಿಭಾಗದಲ್ಲಿರುವ ರಸ್ತೆಯ ಇಕ್ಕೆಲಗಳಲ್ಲಿ ತ್ಯಾಜ್ಯವಸ್ತುಗಳ ರಾಶಿಯೇ ಕಾಣುತ್ತಿದೆ. ಇದರ ಬಗ್ಗೆ ಪಂಚಾಯಿತಿ ಸೂಕ್ತ ಕ್ರಮ ಕೈಗೊಳ್ಳಬೇಕು ಗ್ರಾಮಸ್ಥ ಪ್ರಶಾಂತ್ ಭಂಡಾರಿ ಒತ್ತಾಯಿಸಿದರು. ಗ್ರಾಮಸ್ಥ ಅಚ್ಯುತ ಸಂಪಿಗೆ ಅವರು ಎಸ್‌ಸಿಎಸ್‌ಟಿ ಅನುದಾನದ ವಿವರಗಳನ್ನು ಕೇಳಿದರು. ಕಚೇರಿಯಲ್ಲಿ ಈ ಪಟ್ಟಿ ಸಿದ್ಧವಿದ್ದು, ತಾವು ಪಡೆಯಬಹುದು ಎಂದು ಪಿಡಿಒ ಹೇಳಿದರು.
ಪರಿಶ್ರಮಪಟ್ಟು ಗ್ರಾಮಕ್ಕೆ ತಂದಿರುವ ಇಸಿಜಿ ಮೆಶಿನ್ ಸಂಪಿಗೆಯಲ್ಲಿದೆ. ಅದು ಉಪಯೋಗಕ್ಕೆ ಬಾರದೆ ಒಂದುವರೆ ವರ್ಷವಾಗಿದೆ. ಇದನ್ನ ಒದಗಿಸಲು ಕಾರಣರಾದ ಡಾ.ಪದ್ಮನಾಭ್ ಕಾಮತ್ ಅವರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಪ್ರಶಾಂತ್ ಭಂಡಾರಿ ಸಭೆಯಲ್ಲಿ ಪ್ರಸ್ತಾಪಿಸಿದರು.ಅದನ್ನು ಗುಡ್ಡೆಯಂಗಡಿ ಉಪಕೇಂದ್ರಕ್ಕೆ ವರ್ಗಾಯಿಸುವ ಎಂದು ಪಾಲಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹೇಳಿದರು.
ಸಂಪಿಗೆ ಆರೋಗ್ಯಕೇಂದ್ರದ ಸುತ್ತಮುತ್ತ ಸ್ವಚ್ಛತೆ ಇಲ್ಲದೆ ಸಮಸ್ಯೆಯಾಗಿದೆ. ಸ್ಥಳೀಯ ಹೊಟೇಲ್‌ನ ಕೊಳಚೆ ನೀರು ಈ ಪ್ರದೇಶದಲ್ಲಿ ಹರಿದಾಡುತ್ತದೆ. ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥ ರೋಶನ್ ಒತ್ತಾಯಿಸಿದರು.