ಉಗ್ರರ ನಂಟು..! : ದಕ್ಷಣ ಕನ್ನಡದ ಹಲವೆಡೆ ಎನ್‌ಐಎ ದಾಳಿ : ಮಹತ್ವದ ದಾಖಲೆ ಪತ್ರ ವಶ – ಕಹಳೆ ನ್ಯೂಸ್
ನಿಷೇಧಿತ ಪಿಎಫ್‌ಐ ಸಂಘಟನೆಯ ಷಡ್ಯಂತ್ರಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಎನ್‌ಐಎ ಕಾರ್ಯಾಚರಣೆ ಮುಂದುವರಿಸಿದ್ದು, ದಕ್ಷಿಣ ಕನ್ನಡ ಸೇರಿದಂತೆ ದೇಶದ ೧೪ ಕಡೆಗಳಲ್ಲಿ ಸರಣಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಕರ್ನಾಟಕದ ದಕ್ಷಿಣ ಕನ್ನಡ, ಕೇರಳದ ಕಣ್ಣೂರು, ಮಲಪ್ಪುರಂ, ಮಹಾರಾಷ್ಟ್ರದ ನಾಸಿಕ್, ಕೊಲ್ಲಾಪುರ, ಪಶ್ಚಿಮ ಬಂಗಾಳದ ಮತ್ತು ಬಿಹಾರ ರಾಜ್ಯಗಳ ಮುರ್ಶಿದಾಬಾದ್ ಮತ್ತು ಕತಿಹಾರ್ ಜಿಲ್ಲೆಗಳ ಒಟ್ಟು ೧೪ ಸ್ಥಳಗಳಲ್ಲಿ ದಾಳಿ ನಡೆದಿದೆ.
ದಕ್ಷಿಣ ಕನ್ನಡದಲ್ಲೂ ಸರಣಿ ದಾಳಿ ನಡೆಸಿರುವ ಎನ್‌ಐಎ, ಉಳ್ಳಾಲದ ಕಿನ್ಯಾ, ಬಂಟ್ವಾಳದ ವಳಚ್ಚಿಲ್ ಪದವು ಮತ್ತು ಪಾಣೆ ಮಂಗಳೂರಿನಲ್ಲಿ ಉಗ್ರ ಸಂಘಟನೆಗಳ ಬೆಂಬಲಿಗರು, ಶಂಕಿತರ ಮನೆ, ಕಚೇರಿಗಳನ್ನು ಜಾಲಾಡಿ ಮಹತ್ವದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದೆ.
ಬಂಟ್ವಾಳ ಮೆಲ್ಕಾರಿನ ಬೋಗೋಡಿ ನಿವಾಸಿ ಇಬ್ರಾಹಿಂ ನಂದಾವರ, ಒಳಚ್ಚಿಲ್ ಪದವಿನ ಮುಷ್ತಾಕ್ ಹಾಗೂ ಕಿನ್ಯಾದಲ್ಲಿ ವ್ಯಕ್ತಿಯೊಬ್ಬರ ಮನೆ ಜಾಲಾಡಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದೆ. ಭಯೋತ್ಪಾದನ ಕೃತ್ಯಗಳಿಗೆ ಹವಾಲಾ ಮೂಲಕ ಹಣಕಾಸು ನೆರವಿನ ಪ್ರಕರಣವನ್ನು ಎನ್‌ಐಎ ಈ ಹಿಂದೆಯೇ ಬೇಧಿಸಿ ಹಲವರನ್ನು ಬಂಧಿಸಿತ್ತು. ಅವರ ವಿಚಾರಣೆ ಸಂದರ್ಭ ಮೇಲ್ಕಾರಿನ ಇಬ್ರಾಹಿಂ ಸೇರಿದಂತೆ ಮೂವರ ಹೆಸರು ಬಾಯಿಬಿಟ್ಟಿದ್ದರು ಎನ್ನಲಾಗಿದೆ.
ದಾಳಿ ನಡೆಸುವ ಸಂದರ್ಭ ಇಬ್ರಾಹಿಂ ಮನೆಯಲ್ಲಿ ಇರಲಿಲ್ಲ. ಇಲ್ಲಿಂದ ಪೂರಕ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಯೋತ್ಪಾಧನೆಯ ಸ್ಲೀಪರ್ ಸೆಲ್ ಆಗಿ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡದಲ್ಲಿ ಈ ಹಿಂದೆಯೂ ಅನೇಕರ ವಿರುದ್ಧ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.