ಪ್ಲಾಸ್ಟಿಕ್ ರಾಷ್ಟ್ರ ಧ್ವಜ ಬಳಸದಂತೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮನವಿ ಸುಪ್ರೀಂ ಕೋರ್ಟ್ ಆದೇಶದಂತೆ ಪ್ಲಾಸ್ಟಿಕ್ ರಾಷ್ಟ್ರ ಧ್ವಜ ಮಾರಾಟ ನಿಷೇಧಿಸುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರರಿಗೆ, ಆರಕ್ಷಕ ಠಾಣೆಗಳಿಗೆ ಹಾಗೂ 100 ಕ್ಕಿಂತಲೂ ಹೆಚ್ಚು ಶಾಲಾ ಕಾಲೇಜುಗಳಿಗೆ ಮನವಿಯನ್ನು ನೀಡಲಾಯಿತು.
ರಾಷ್ಟ್ರ ಧ್ವಜವು ರಾಷ್ಟ್ರದ ಭಾವೈಕ್ಯದ ಸಂಕೇತವಾಗಿದೆ. ಆಗಸ್ಟ್ 15 ಮತ್ತು ಜನವರಿ 26ರಂದು ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತೇವೆ. ಆದರೆ ಅದೇ ದಿನ ಸಣ್ಣ ಸಣ್ಣ ಪ್ಲಾಸ್ಟಿಕ್ ರಾಷ್ಟ್ರಧ್ವಜಗಳು ಕಸ ಮತ್ತು ಕಾಣಸಿಗುತ್ತವೆ. ಪ್ಲಾಸ್ಟಿಕ್ ಧ್ವಜಗಳು ಚರಂಡಿಗಳಲ್ಲಿ ಬೇಗನೆ ನಾಶವಾಗುವುದಿಲ್ಲ ಆದ್ದರಿಂದ ಅನೇಕ ದಿನಗಳವರೆಗೆ ಈ ರಾಷ್ಟ್ರಧ್ವಜಗಳ ಅವಮಾನವನ್ನು ನೋಡಬೇಕಾಗುತ್ತದೆ. ರಾಜ್ಯ ಸರಕಾರ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ತಹಶೀಲ್ದಾರರಿಗೆ ಮನವಿಯನ್ನು ನೀಡಲಾಯಿತು. ಹಾಗೂ ವಿದ್ಯಾರ್ಥಿಗಳಿಂದ ರಾಷ್ಟ್ರಧ್ವಜದ ಅಪಮಾನ ಅಥವಾ ಅನಾದರವಾಗುವ ಕೃತ್ಯಗಳು ಆಗದಂತೆ ಶಾಲಾ ಕಾಲೇಜುಗಳಿಗೆ ಮನವಿಯನ್ನು ನೀಡಲಾಯಿತು.
ಪ್ಲಾಸ್ಟಿಕ್ ಬಳಸಿ ರಾಷ್ಟ್ರಧ್ವಜದ ಅಪಮಾನ ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅದರಂತೆ ಕೇಂದ್ರ ಮತ್ತು ರಾಜ್ಯಗೃಹ ಇಲಾಖೆಗಳು ಮತ್ತು ಶಿಕ್ಷಣ ಇಲಾಖೆಗಳು ಸುತ್ತೋಲೆ ಹೊರಡಿಸಿದ್ದವು. ಇದರೊಂದಿಗೆ ಕೇಂದ್ರ ಸರಕಾರ ಪ್ಲಾಸ್ಟಿಕ್ ನಿಷೇಧಿಸಲು ನಿರ್ಧರಿಸಿದೆ. ಅದರ ಪ್ರಕಾರ ಪ್ಲಾಸ್ಟಿಕ್ ರಾಷ್ಟ್ರ ಧ್ವಜ ಮಾರಾಟ ಸಂವಿಧಾನ ಬಾಹಿರವಾಗಿದೆ. ಈ ವರ್ಷವೂ ತ್ರಿವರ್ಣ ಧ್ವಜಗಳ, ಮಾಸ್ಕ್ ಗಳ ಮಾರಾಟ ಹಲವು ಅಂಗಡಿಗಳು ಹಾಗೂ ಇ- ಕಾಮರ್ಸ್ ಜಾಲತಾಣಗಳಲ್ಲಿ ಕಂಡು ಬಂದಿದೆ. ಇಂತಹ ಮಾಸ್ಕ್ ಮಾರಾಟದಿಂದ ರಾಷ್ಟ್ರಧ್ವಜದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ. ತ್ರಿವರ್ಣ ಮಾಸ್ಕ್ ಗಳು ದೇಶಭಕ್ತಿಯ ಪ್ರದರ್ಶನದ ಮಾಧ್ಯಮವಲ್ಲ. ಅಲ್ಲದೆ ಧ್ವಜ ಸಂಹಿತೆಗೆ ಅನುಸಾರ ರಾಷ್ಟ್ರಧ್ವಜವನ್ನು ಈ ರೀತಿ ಬಳಸುವುದು ಧ್ವಜಕ್ಕೆ ಮಾಡಿದ ಅಪಮಾನ. ಇದು ರಾಷ್ಟ್ರೀಯ ಗೌರವದ ಮಾನನಷ್ಟ ತಡೆ ಕಾಯಿದೆ 1971ರ ಉಲ್ಲಂಘನೆಯಾಗಿದೆ. ಆದ್ದರಿಂದ ತ್ರಿವರ್ಣ ಧ್ವಜ ಮಾಸ್ಕ್ ಮಾರಾಟ ಮಾಡುವ ಮತ್ತು ಬಳಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆರಕ್ಷಕ ಠಾಣೆಗಳಿಗೆ ಮನವಿಯನ್ನು ನೀಡಲಾಯಿತು.
ಇಂದಿನ ವಿದ್ಯಾರ್ಥಿಗಳು ದೇಶದ ಮುಂಬರುವ ಪೀಳಿಗೆಯಾಗಿದ್ದಾರೆ! ಈ ಭಾವಿ ಪೀಳಿಗೆ ರಾಷ್ಟ್ರಾಭಿಮಾನಿಗಳಾಗಲಿ, ಎಂಬ ಉದ್ದೇಶದಿಂದ ಸಮಿತಿಯು ಕಳೆದ 20 ವರ್ಷಗಳಿಂದ ರಾಷ್ಟ್ರಧ್ವಜವನ್ನು ಗೌರವಿಸಿ ಎಂಬ ಉಪಕ್ರಮವನ್ನು ಜಾರಿಗೊಳಿಸುತ್ತಿದೆ. ರಾಷ್ಟ್ರಧ್ವಜವನ್ನು ಗೌರವಿಸಿ ಈ ಬಗ್ಗೆ ವ್ಯಾಖ್ಯಾನವನ್ನು ಮತ್ತು ಪ್ರಶೋತ್ತರ ಸ್ಪರ್ಧೆಯನ್ನು ಏರ್ಪಡಿಸಲು ವಿಶ್ವವಿದ್ಯಾಲಯಗಳಲ್ಲಿ ಅನುಮತಿ ನೀಡಬೇಕೆಂದು ಮನವಿಯನ್ನು ನೀಡಲಾಯಿತು.