ಹಾಸನ: ಮಂಗಳೂರು ಸಮೀಪದ ಗುರುಪುರ ಗ್ರಾಮದ 27 ವರ್ಷದ ಶ್ರವಣ್‌ಕುಮಾರ್ 9,300 ಕಿ.ಮೀ ಸೈಕಲ್ ತುಳಿದು 14 ರಾಜ್ಯ ಹಾಗೂ 2 ದೇಶಗಳನ್ನು ಸುತ್ತಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಶ್ರವಣ್ ಇಂಜಿನಿಯರಿಂಗ್ ವ್ಯಾಸಂಗ ಬಳಿಕ ದೆಹಲಿಯ ಇ ಕಾಮರ್ಸ್ ಕಂಪನಿಯಲ್ಲಿ ಟೀಂ ಲೀಡರ್ ಆಗಿ ಕೆಲಸ ಮಾಡುತ್ತಿದ್ದರು. ಹಾಗೊಂದು ದಿನ ಸ್ವಚ್ಛ ಭಾರತಕ್ಕೆ ತನ್ನದೊಂದು ಅಳಿಲು ಸೇವೆ ಸಲ್ಲಿಸಬೇಕೆಂಬ ಉದ್ದೇಶದಿಂದ ಕೆಲಸಕ್ಕೆ ರಾಜೀನಾಮೆ ನೀಡಿ ಸೈಕಲ್‌ನಲ್ಲಿ ದೇಶ ಸಂಚಾರ ಆರಂಭಿಸಿದ್ದಾರೆ.
2018ರ ಮೇ 3 ರಂದು ದೆಹಲಿಯಿಂದ ಆರಂಭವಾಗಿರುವ ಸೈಕಲ್ ಸವಾರಿ 14 ರಾಜ್ಯಗಳು, 2 ದೇಶಗಳ ಮೂಲಕ ಅ.3ರ ಮಧ್ಯಾಹ್ನ ಹಾಸನ ತಲುಪಿದೆ. ಹಾಸನದಿಂದ ಕನ್ಯಾಕುಮಾರಿಗೆ ಹೋಗುವುದಾಗಿ ಅವರು ಹೇಳಿದ್ದಾರೆ.
ನಿತ್ಯ 220ರಿಂದ 300 ಕಿ.ಮೀ. ಸೈಕಲ್ ತುಳಿದಿರುವ ಶ್ರವಣ್ ಕನ್ನಡ, ಹಿಂದಿ, ತಮಿಳು, ಮಲಯಾಳ, ಇಂಗ್ಲಿಷ್ ಸೇರಿ 8 ಭಾಷೆಗಳಲ್ಲಿ ನೈಪುಣ್ಯ ಸಾಧಿಸಿದ್ದಾರೆ. ಯಾವುದಾದರೂ ನಗರಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಅಂಗಡಿ, ಹೋಟೆಲ್‌ಗಳಿಗೆ ತೆರಳಿ ಸ್ವಚ್ಛತೆಯ ಅರಿವು ಮೂಡಿಸುತ್ತಾರೆ. ಭಾರತ ವಿಶ್ವಗುರುವಾಗಬೇಕೆಂಬ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕು.
ದೇಶ ಪ್ರಗತಿ ಸಾಧಿಸಬೇಕೆಂದರೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಆದ್ದರಿಂದ ನಿಮ್ಮ ಅಂಗಡಿ, ಮನೆಗಳಲ್ಲಿ ಕಸದ ಡಬ್ಬಿಗಳನ್ನು ಕಡ್ಡಾಯವಾಗಿ ಇಡಬೇಕು. ರಸ್ತೆ ಬದಿ ಕಸ ಸುರಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಕಂಡಕಂಡವರಲ್ಲಿ ವಿನಮ್ರವಾಗಿ ಹೇಳುವ ಮೂಲಕ ಸಾರ್ವಜನಿಕರ ಗಮನ ಸೆಳೆಯುತ್ತಿದ್ದಾರೆ.
ಸ್ವಚ್ಛ ಭಾರತಕ್ಕಾಗಿ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು. ಪ್ರಜೆಗಳಾದ ನಾವು ದೇಶದ ಒಳಿತಿಗಾಗಿ ಏನಾದರೂ ಸೇವೆ ಸಲ್ಲಿಸಬೇಕೆಂದು ಸೈಕಲ್ ಸಂಚಾರದ ಮೂಲಕ 14 ರಾಜ್ಯ ಸುತ್ತಿದ್ದೇನೆ. ಕನ್ಯಾಕುಮಾರಿ ತಲುಪಿ ಸೈಕಲ್ ಸವಾರಿ ನಿಲ್ಲಿಸುತ್ತೇನೆ ಎಂದು ಶ್ರವಣ್‌ಕುಮಾರ್ ಹೇಳಿದ್ದಾರೆ .