ಸ್ಯಾಂಡಲ್‌ವುಡ್‌ನ ಮತ್ತೊಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದೆ. ಹೌದು.. ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಮದುವೆಯಾಗಲಿದ್ದಾರೆ. ಆಗಸ್ಟ್ 24ರಂದು ವಿರಾಜಪೇಟೆಯಲ್ಲಿ ಹಸೆಮಣೆಗೇರಲಿದೆ. ಈ ಹಿನ್ನಲೆಯಲ್ಲಿ ಇವರು ವಿವಿಧ ಕಲಾವಿದರು, ಗಣ್ಯರನ್ನು ಭೇಟಿಯಾಗಿ ಮದುವೆಯ ಆಮಂತ್ರಣ ಪತ್ರಿಕೆಯನ್ನು ಹಂಚಿದ್ದಾರೆ.
ಹಲವು ವರ್ಷಗಳಿಂದ ಸ್ನೇಹಿತರಾಗಿದ್ದ ನಟ ಭುವನ್ ಹಾಗೂ ನಟಿ ಹರ್ಷಿಕಾ ಪೂಣಚ್ಚ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಸಹವಾಜವಾಗಿಯೇ ಅಭಿಮಾನಿಗಳಿಗೆ ಸಂಭ್ರಮ ತಂದಿದೆ. ಈಗಾಗಲೇ ಬ್ಯಾಚುಲರ್ ಪಾರ್ಟಿ ಮುಗಿಸಿಕೊಂಡು ಬಂದಿರುವ ಈ ಜೋಡಿ, ಇದೀಗ ತಮ್ಮ ಮದುವೆಗೆ ಗಣ್ಯರನ್ನು ಆಹ್ವಾನಿಸುತ್ತಿದೆ.
ಡಾ. ರಾಜ್ ಕುಮಾರ್ ಕುಟುಂಬದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮತ್ತು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿಯಾಗಿ ಮದುವೆಗೆ ಹರ್ಷಿಕಾ-ಭುವನ್ ಆಹ್ವಾನಿಸಿದ್ದು ಹಾಗೆಯೇ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಅವರನ್ನು ಈ ಜೋಡಿ ಭೇಟಿಯಾದ ಫೋಟೋ ವೈರಲ್ ಆಗಿದೆ. ರಮೇಶ್ ಅರವಿಂದ್ ಗೂ ಹರ್ಷಿಕಾ ಆಮಂತ್ರಣ ಪತ್ರ ನೀಡಿದರು. ಮಾತ್ರವಲ್ಲ ಗಣೇಶ್ ದಂಪತಿ, ಹಿರಿಯ ಕಲಾವಿದರಾದ ದೊಡ್ಡಣ್ಣ, ಸುಧಾರಾಣಿ ಮತ್ತಿತರರನ್ನು ಅವರನ್ನೂ ಹರ್ಷಿಕಾ-ಭುವನ್ ಆಹ್ವಾನಿಸಿದರು.
ಚಿತ್ರರಂಗ ಮಾತ್ರವಲ್ಲ ರಾಜಕೀಯದ ಪ್ರಮುಖರಿಗೂ ಈ ಜೋಡಿ ಆಮಂತ್ರಣ ಪತ್ರಿಕೆ ನೀಡಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿ ಹಲವು ಪ್ರಮುಖರನ್ನು ಆಹ್ವಾನಿಸಲಾಗಿದೆ.