ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಅದರೊಂದಿಗೆ ದೌರ್ಜನ್ಯಗಳು ಸಹ ಹೆಚ್ಚುತ್ತಿದೆ. ದಕ್ಷಿಣ ದೆಹಲಿಯಲ್ಲಿ ನಡೆದ ಹೇಯ ಕೃತ್ಯವೊಂದರಲ್ಲಿ ಶಿಕ್ಷಕಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವುದು ಬೆಳಕಿಗೆ ಬಂದಿದೆ.ನಗರದಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ.ಅದರೊಂದಿಗೆ ದೌರ್ಜನ್ಯ ಸಹ ಹೆಚ್ಚಾಗಿದೆ. ದಕ್ಷಿಣ ದೆಹಲಿ ಪ್ರತಿಷ್ಠಿತ ಶಾಲೆಯೊಂದರ ಶಿಕ್ಷಕಿಯೊಬ್ಬರು ಆಟೋದಿಂದ ಬಿದ್ದು ಗಾಯಗೊಂಡಿದ್ದಾರೆ. ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅವರನ್ನು ರಸ್ತೆ ಉದ್ದಕ್ಕೂ ಎಳೆದೊಯ್ದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆ ಕಳೆದ ಶುಕ್ರವಾರ ಆಗಸ್ಟ್ 11ರ ಮಧ್ಯಾಹ್ನ 3,23ಕ್ಕೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ಕುರಿತು ಸಾಕೇತ್ ಪೊಲೀಸ್ ಠಾಣೆಗೆ ಪಿಸಿಆರ್ (ಪೊಲೀಸ್ ಕಂಟ್ರೋಲ್ ರೂಂ) ಕರೆ ಬಂದಿತು. ಅಪರಿಚಿತ ದುಷ್ಕರ್ಮಿಗಳು ಸಂತ್ರಸ್ತ ಮಹಿಳೆಯ ಕೈಯಿಂದ ಐಫೋನ್ ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಅಪಘಾತದಲ್ಲಿ ಜವಾಹರ್ ಪಾರ್ಕ್ ಪ್ರದೇಶದ ನಿವಾಸಿ ಯೋವಿಕಾ ಚೌಧರಿ (24) ಎಂಬ ಶಿಕ್ಷಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರು ಶುಕ್ರವಾರ ಮಧ್ಯಾಹ್ನ ಕೆಲಸ ಮಾಡುವ ಜ್ಞಾನ ಭಾರತಿ ಶಾಲೆಯಿಂದ ಆಟೋದಲ್ಲಿ ಮನೆಗೆ ಹೋಗುತ್ತಿರುವುದು ತಿಳಿದು ಬಂದಿದೆ. ಶಿಕ್ಷಕಿ ಸಾಕೇತ್‌ನ ಖೋಕಾ ಮಾರ್ಕೆಟ್‌ನ ಸಮೀಪ ತಲುಪಿದ್ದರು. ಈ ವೇಳೆ, ಬೈಕ್‌ನಲ್ಲಿ ಬಂದ ಮೂವರು ಅಪರಿಚಿತ ದುಷ್ಕರ್ಮಿಗಳು ಅವರ ಆಟೋವನ್ನು ಸುತ್ತವರಿದರು. ಬಳಿಕ ಚಲಿಸುತ್ತಿದ್ದ ಆಟೋವನ್ನು ಹಿಂಬಾಲಿಸಿದ ದುಷ್ಕರ್ಮಿಗಳು ಶಿಕ್ಷಕಿ ಬಳಿಯಿದ್ದ ಮೊಬೈಲ್ ಫೋನ್ ಕಸಿದುಕೊಳ್ಳಲು ಯತ್ನಿಸಿದರು. ಆದರೆ, ಶಿಕ್ಷಕಿ ತನ್ನ ಫೋನ್ ಬಿಡದೇ ಆಟೋದಿಂದ ಕೆಳಗೆ ಬಿದ್ದಿದ್ದಾರೆ.
ಶಿಕ್ಷಕಿ ತನ್ನ ಫೋನ್ ಅನ್ನು ಬಿಡದೇ ದುಷ್ಕರ್ಮಿಗಳ ವಿರುದ್ಧ ಹೋರಾಟ ನಡೆಸಿದ್ದರು. ಆದರೆ ದುಷ್ಕರ್ಮಿಗಳು ಫೊನ್‌ಗಾಗಿ ಅವರನ್ನು ರಸ್ತೆ ಉದ್ದಕ್ಕೂ ಕೆಲ ಮೀಟರ್‌ಗಳಷ್ಟು ದೂರ ಎಳೆದೊಯ್ದರು. ದುಷ್ಕರ್ಮಿಗಳೊಂದಿಗೆ ಹೋರಾಡಲು ಸಾಧ್ಯವಾಗದ ಹಿನ್ನೆಲೆ ಶಿಕ್ಷಕಿ ತನ್ನ ಫೋನ್ ಅನ್ನು ಬಿಟ್ಟರು. ಆಗ ದುಷ್ಕರ್ಮಿಗಳು ಫೋನ್‌ನೊಂದಿಗೆ ಪರಾರಿಯಾಗಿದ್ದಾರೆ. ಈ ವೇಳೆ ಶಿಕ್ಷಕಿಯ ಮುಖಕ್ಕೆ ಗಂಭೀರ ಗಾಯಗಳಾಗಿವೆ. ಆಟೋದಿಂದ ಬಿದ್ದು ಗಾಯಗೊಂಡಿದ್ದ ಶಿಕ್ಷಕಿ ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ಕುರಿತು ಸೆಕ್ಷನ್ 356/379/34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಂತರ ಅದನ್ನು 392/34 ಐಪಿಸಿಗೆ ಪರಿವರ್ತಿಸಲಾಗಿದೆ. ನಾವು ಅಪರಾಧಿಗಳನ್ನು ಗುರುತಿಸಲು ಮತ್ತು ಅವರನ್ನು ಬಂಧಿಸಲು ಆ ಪ್ರದೇಶದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದೇವೆ. ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಈ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.