ಮಂಗಳೂರು: ಹತ್ಯಡ್ಕ ಗ್ರಾಮದ ಕಪಿಲಾ ನದಿಯಿಂದ ಹತ್ಯಡ್ಕ ಗ್ರಾಮ ಪಂಚಾಯತಿ ಮೂಲಕ ಗ್ರಾ.ಪಂ. ಉಪಾಧ್ಯಕ್ಷರು ಅಕ್ರಮ ಮರಳುಗಾರಿಕೆ ನಡೆಸಿರುವ ವಿರುದ್ದ ದೂರು ದಾಖಲಿಸಿಕೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಆಗ್ರಹಿಸಿದೆ.
ಅ. 2ರಂದು ಪಂ. ಉಪಾಧ್ಯಕ್ಷ ಜಗನ್ನಾಥ ಗೌಡ ಎಂಬುವರು ಅವರ ಬರಂಗಾಯ ಎಂಬಲ್ಲಿನ ಹೊಳೆಯಿಂದ ಹಿಟಾಚಿ ಯಂತ್ರದಿಂದ ಮರಳು ತೆಗೆದು ಪಿಕಪ್‍ನಲ್ಲಿ ಸಾಗಿಸಿ ಅಕ್ರಮವಾಗಿ ಸಾಗಿಸಿ ಶೇಖರಿಸಿದ್ದಾರೆ. ಈ ಬಗ್ಗೆ ಗಣಿ ಇಲಾಖೆಗೆ ತಿಳಿಸಲು ದೂರವಾಣಿ ಮಾಡಿತ್ತಾದರೂ ಕರೆ ಸ್ವೀಕರಿಸದೇ ಇದ್ದುದರಿಂದ ಬಳಿಕ ಪೋಲಿಸರಿಗೆ ದೂರು ನೀಡಲಾಗಿತ್ತು.
ಪೊಲೀಸರೊಬ್ಬರು ಸ್ಥಳಕ್ಕೆ ಆಗಮಿಸಿದಾಗ ಅವರಿಗೆ ಸ್ಥಳದಲ್ಲಿ ಪಿಕಪ್ ಮತ್ತು ಜೆಸಿಬಿ ಪತ್ತೆಯಾಗಿತ್ತು. ಆ ಬಳಿಕ ಅ. 3ರಂದು ಗಣಿ ಇಲಾಖೆಯ ಅಧಿಕಾರಿಗೆ ಸ್ಥಳಕ್ಕೆ ಭೇಟಿ ನೀಡಿ ಅಕ್ರಮವಾಗಿ ತೆಗೆದ ಮರಳನ್ನು ಮಹಜರು ಮಾಡಿಕೊಂಡು ಬಂದಿರುತ್ತಾರೆ. ಆದರೆ ಕೇವಲ ಮರಳನ್ನು ಮಾತ್ರ ಮಹಜರು ಮಾಡಿದರೆ ಸಾಲದು. ಈ ಕೃತ್ಯಕ್ಕೆ ಬಳಸಿದ ಎರಡು ಪಿಕ್‍ಅಪ್ ವಾಹನ ಮತ್ತು ಹಿಟಾಚಿ ಯಂತ್ರವನ್ನು ತಮ್ಮ ಇಲಾಖೆ ಕಾನೂನು ವಶಪಡಿಸಿಕೊಳ್ಳಬೇಕು.
ಕಾನೂನು ಬಾಹಿರವಾಗಿ ಮರಳನ್ನು ತೆರೆಯಲು ಪಂ.ಲೆಟರ್‍ಹೆಡ್ ಮತ್ತು ಮೊಹರನ್ನು ಬಳಸಿ ತಾವೇ ಸಹಿ ಹಾಕಿ ನೀಡಿದ ಅರಸಿನಮಕ್ಕಿ ಪಿಡಿಓ ವಿರುದ್ದ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೆ ಈ ಕೃತ್ಯಕ್ಕೆ ಸಹಕರಿಸಿದ ಪಂ.ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೇಲೆ ದೂರು ದಾಖಲು ಮಾಡಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾ ಪಂ. ಸಿಇಒ ಮತ್ತು ಸರಕಾರದ ಸಂಬಂಧಿತ ಇಲಾಖೆಯ ಮುಖ್ಯಸ್ಥರಿಗೆ ವರದಿ ನೀಡಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ನೀಡಿದ ದೂರಿನಲ್ಲಿ ಒಕ್ಕೂಟ ಆಗ್ರಹಿಸಿದೆ.