ಉತ್ತರ ಪ್ರದೇಶ :ಉತ್ತರ ಪ್ರದೇಶದ ವಾರಣಾಸಿಯಲ್ಲಿ ಶ್ವಾಸನಾಳದಲ್ಲಿ ಬರ್ತ್ಡೇ ಕೇಕ್ ಸಿಲುಕಿ ಎಂಟು ವರ್ಷದ ಬಾಲಕ ಮೃತಪಟ್ಟಿದ್ದಾನೆ.ಜನ್ಮ ದಿನಾಚರಣೆಯ ಕೇಕ್ ತಿಂದು ೮ ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.
ಶ್ವಾಸನಾಳದಲ್ಲಿ ಕೇಕ್ ಸಿಲುಕಿದ ಕಾರಣ ಉಸಿರಾಟದ ತೊಂದರೆ ಅನುಭವಿಸಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇಲ್ಲಿನ ಜನ್ಸಾ ಪೊಲೀಸ್ ಠಾಣಾ ವ್ಯಾಪ್ತಿಯ ಸಜೋಯ್ ಗ್ರಾಮದ ನಿವಾಸಿ, ಶಿಕ್ಷಕ ಧೀರಜ್ ಶ್ರೀವಾಸ್ತವ್ ಮನೆಯಲ್ಲಿ ಸೋಮವಾರ ಹಿರಿಮಗನ ಹುಟ್ಟುಹಬ್ಬ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ರಾತ್ರಿ ಮನೆಯಲ್ಲಿ ಕೇಕ್ ಕತ್ತರಿಸಿ ಕುಟುಂಬ ಸದಸ್ಯರೆಲ್ಲರೂ ಸಂಭ್ರಮಿಸುತ್ತಿದ್ದರು. ಆದರೆ, ಶ್ರೀವಾಸ್ತವ್ ಅವರ ಕಿರಿಮಗನಿಗೆ ಕೇಕ್ ತಿಂದ ಬಳಿಕ ಆರೋಗ್ಯ ಹದಗೆಟ್ಟಿದೆ. ಕೇಕ್ ತುಂಡು ಗಂಟಲಿನಲ್ಲಿ ಸಿಲುಕಿದ್ದು ಉಸಿರಾಡಲು ಸಮಸ್ಯೆ ಉಂಟಾಗಿದೆ. ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಎರಡು ದಿನಗಳ ಚಿಕಿತ್ಸೆ ಬಳಿಕ ಬಾಲಕ ಮೃತಪಟ್ಟಿದ್ದಾನೆ.