Wednesday, January 22, 2025
ದಕ್ಷಿಣ ಕನ್ನಡರಾಜ್ಯ

ರಾಜ್ಯದೆಲ್ಲೆಡೆ ಕಾಣಿಸಿಕೊಂಡಿರುವ ಮದ್ರಾಸ್ ಐ ಸೋಂಕು : ಕರಾವಳಿಯ ಜನತೆಗೆ ಎಚ್ಚರಿಕೆಯಿಂದ ಇರವಂತೆ ಸೂಚಿಸಿದ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ – ಕಹಳೆ ನ್ಯೂಸ್

ದಕ್ಷಿಣ ಕನ್ನಡ : ರಾಜ್ಯದೆಲ್ಲೆಡೆ ಕಾಣಿಸಿಕೊಂಡಿರುವ ಮದ್ರಾಸ್ ಐ ಸೋಂಕು ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಏರಿಕೆಯಾಗಿದ್ದು, ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆಯಿಂದ ಇರವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ಸೂಚನೆ ನೀಡಿದ್ದಾರೆ.

ಮದ್ರಾಸ್ ಐ ಎಂಬುದು ವೈರಸ್ ಮೂಲಕ ಹರಡುತ್ತದೆ. ಸೋಂಕು ತಗುಲಿದವರ ಕಣ್ಣುಗಳು ಕೆಂಪು ಬಣ್ಣಕ್ಕೆ ತಿರುಗಿ ಕಣ್ಣಿನಲ್ಲಿ ಕಿರಿಕಿರಿ ಅನುಭವವಾಗುತ್ತದೆ. ಜತೆಗೆ ನೀರು ಸೋರುತ್ತಿರುತ್ತದೆ. ಕಣ್ಣಿನಲ್ಲಿ ಸೋಂಕಿನ ಪ್ರಮಾಣ ಹೆಚ್ಚಾದರೆ ವ್ಯಕ್ತಿಯ ಕುತ್ತಿಗೆಯಲ್ಲಿ ಹಾಗೂ ತಲೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ಮೇಲಿನ ಲಕ್ಷಣಗಳು ಕಂಡುಬಂದರೆ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕೆಂದು ಸಲಹೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯದಾದ್ಯಂತ ಜುಲೈ 25 ರಿಂದ ಆಗಸ್ಟ್ 4ರ ವರೆಗೆ 40,477 ಪ್ರಕರಣಗಳು ಪತ್ತೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 504 ಮದ್ರಾಸ್ ಐ ಪ್ರಕರಣಗಳು ವರದಿಯಾಗಿದೆ. ಕಲಬುರ್ಗಿ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲೂ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಪ್ರಾಥಮಿಕ ಹಂತದಲ್ಲೇ ಈ ರೋಗವನ್ನು ಪತ್ತೆ ಹಚ್ಚಿ ಜಾಗೃತರಾಗಿರಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸೋಂಕಿನಿಂದ ಬಳಲುತ್ತಿರುವವರು ಶುದ್ಧ ಕರವಸ್ತ್ರವನ್ನು ಬಳಸಿ ಕಣ್ಣೀರನ್ನು ಸ್ವಚ್ಛಗೊಳಿಸುತ್ತಿರಬೇಕು. ಆ ಕರವಸ್ತ್ರವನ್ನು ಬೇರೆಯವರು ಮುಟ್ಟದಂತೆ ನೋಡಿಕೊಳ್ಳಬೇಕು. ಇನ್ನೂ ಕಣ್ಣಿನಲ್ಲಿ ಕಿರಿಕಿರಿ ಉಂಟಾದಾಗ ಉಜ್ಜುವುದನ್ನು ಮಾಡಿದರೆ ಮತ್ತಷ್ಟು ಕಣ್ಣು ಊದಿಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಮದ್ರಾಸ್ ಐ ಸೋಂಕಿನಿಂದ ಬಳಲುತ್ತಿರುವವರು ಸಾರ್ವಜನಿಕ ಸ್ಥಳಗಳಿಂದ ದೂರ ಉಳಿದು, ಮನೆಯಲ್ಲಿಯೇ ಎರಡು ದಿನ ಇರಲು ಪ್ರಯತ್ನಿಸಬೇಕು. ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡರೆ ಎರಡು ದಿನ ಶಾಲೆಗೆ ಕಳುಹಿಸದಿರುವುದು ಉತ್ತಮ. ಈ ಸೋಂಕಿಗೆ ಚಿಕಿತ್ಸೆಯು ಎಲ್ಲ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೀಡಲಾಗುತ್ತಿದೆ. ಈ ಸಂಬಂಧ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವಂತೆ ಡಿಡಿಪಿಐಗೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು