ಶಿವಮೊಗ್ಗ: ಮಹಿಳೆಯನ್ನು ಕೊಂದು ಹಾಕಿದ್ದ ಚಿರತೆ ಕೊನೆಗೆ ಅರಣ್ಯ ಇಲಾಖೆ ಬೋನಿಗೆ ಬಿದ್ದಿದೆ. ರೈತ ಮಹಿಳೆಯನ್ನು ಕೊಂದು ತಿಂದಿದ್ದ ನರ ಭಕ್ಷಕ ಚಿರತೆಯು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಇಂದು ಬಿದ್ದಿದೆ.
ಅರಣ್ಯ ಇಲಾಖೆಯು ಬಿಕ್ಕೋನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಚಿರತೆ ಚಲನವಲನದ ಬಗ್ಗೆ ಗಮನಿಸಿ ಬೋನ್ ಇಡಲಾಗಿತ್ತು. ಈ ಬೋನ್‌ಗೆ ಚಿರತೆಯು ನಿನ್ನೆ ರಾತ್ರಿ ಸುಮಾರು 10 ಗಂಟೆಗೆ ಬಿದ್ದಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಚಿರತೆ ಬೋನಿಗೆ ಬಿದ್ದ ಮಾಹಿತಿ ಸಿಗುತ್ತಿದ್ದಂತೆಯೇ ಸುತ್ತಮುತ್ತಲ ಗ್ರಾಮಸ್ಥರು ಚಿರತೆ ನೋಡಲು ಆಗಮಿಸಿದ್ದರು. ನರ ಬಲಿ ಪಡೆದ ಚಿರತೆಯನ್ನು ನೋಡಲು ಜನಸಾಗರವೇ ಸೇರಿತ್ತು. ನಂತರ ಅರಣ್ಯ ಇಲಾಖೆಯವರು ಚಿರತೆಯನ್ನು ತಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ತೆಗೆದುಕೊಂಡು ಹೋದರು. ನಂತರ ಈ ಚಿರತೆಯನ್ನು ಇಲ್ಲಿನ ಚಿರತೆಗಳ ಬಳಿ ಬಿಡದೆ, ಅದನ್ನು ಬೆಂಗಳೂರಿನ ಬನ್ನೇರುಘಟ್ಟಕ್ಕೆ ಶಿಫ್ಟ್ ಮಾಡುವುದಾಗಿ ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಶಿವಮೊಗ್ಗ ತಾಲೂಕು ಬಿಕ್ಕೂನಹಳ್ಳಿ ಗ್ರಾಮದಲ್ಲಿ ಆಗಸ್ಟ್ 8 ರಂದು ಬಿಕ್ಕೂನಹಳ್ಳಿ ಗ್ರಾಮದ ರೈತ ಮಹಿಳೆ ಯಶೋಧಮ್ಮ ಅವರನ್ನು ಚಿರತೆಯು ಕೊಂದು ದೇಹದ ಒಂದು ಭಾಗವನ್ನು ತಿಂದು ಹೋಗಿತ್ತು. ಇದರಿಂದ ಈ ಭಾಗದ ಜನ ಭಯಭೀತರಾಗಿದ್ದರು. ಬಿಕ್ಕೂನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳು ಗುಡ್ಡದ ಪಕ್ಕದಲ್ಲಿಯೇ ಇರುವುದರಿಂದ ತೋಟ, ಹೊಲಗಳಿಗೆ ಹೋಗಲು ಜನರು ಭಯಪಡುವಂತಾಗಿತ್ತು.
ನಿನ್ನೆ ಮಧ್ಯಾಹ್ನ ಬನ್ನಿಕೆರೆ ಗ್ರಾಮದ ಹೊಲದಲ್ಲಿ ಚಿರತೆ ಕಂಡು ಬಂದಿತ್ತು. ಚಿರತೆ ಸೆರೆಯ ಬಗ್ಗೆ ಮಾತನಾಡಿದ ಶಂಕರ ವಲಯದ ಡಿಎಫ್‌ಒ ಶಿವಶಂಕರ್ ಅವರು, ರೈತ ಮಹಿಳೆ ಯಶೋಧಮ್ಮನವರನ್ನು ಚಿರತೆಯೊಂದು ಕೊಂದು ಹಾಕಿದ ನಂತರ ನಮ್ಮಅರಣ್ಯ ಇಲಾಖೆಯುಚಿರತೆಯನ್ನು ಹಿಡಿಯಲು ಮೈಸೂರಿನಿಂದ ಚಿರತೆ ಟಾಸ್ಕ್ ಪೂರ್ಸ್ ತಂಡ ಕರೆಯಿಸಲಾಗಿತ್ತು.
ಚಿರತೆ ಎಲ್ಲಿಲ್ಲೆ ಓಡಾಡಿತ್ತು ಹಾಗೂ ನೀರು ಹರಿಯುವ ಹಳ್ಳದ ಬಳಿ ಸೇರಿ ಒಟ್ಟು 7 ಟ್ರಾಕ್ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಅಲ್ಲದೇ 10ಕ್ಕೂ ಹೆಚ್ಚು ಬೋನ್‌ಗಳನ್ನು ಅಳವಡಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಚಿರತೆಯ ಚಲನವಲನದ ಬಗ್ಗೆ ಗಮನಿಸಿ ಚಿರತೆಯನ್ನು ಸೆರೆ ಹಿಡಿಯಲು ಬೋನ್ ಇಡಲಾಗಿತ್ತು.
ಇಂದು ಬೆಳಗ್ಗೆ ಚಿರತೆ ಬೋನ್‌ಗೆ ಬಿದ್ದಿದೆ. ಇದು ರೈತ ಮಹಿಳೆಯನ್ನು ಕೊಂದ ಚಿರತೆಯೇ ಆಗಿದೆ. ಇದರ ಪಾದದ ಗುರುತು ಹಾಗೂ ದೇಹದ ಮೇಲಿನ ಚಿಕ್ಕೆಯನ್ನು ಗಮನಿಸಿ ನೋಡಿದಾಗ ಇದು ಮಹಿಳೆಯನ್ನು ಕೊಂದ ಚಿರತೆಯೇ ಆಗಿದೆ. ಯಶೋಧಮ್ಮನನ್ನು ಚಿರತೆ ತಿಂದು ಹಾಕಿದ ಕೆಲವೇ ಕೆಲವು ಮೀಟರ್ ದೂರದಲ್ಲಿ ಚಿರತೆ ಸೆರೆಯಾಗಿದೆ ಎಂದು ತಿಳಿಸಿದ್ದಾರೆ.