Wednesday, January 22, 2025
ಸುದ್ದಿ

ಆರ್ ಬಿಐ ಹೊಸ ಮಾರ್ಗಸೂಚಿ : ಕಂತು ಪಾವತಿಸದ ಸಾಲಗಾರನಿಗೆ ದಂಡ ಬಡ್ಡಿ ನಿಷೇಧ – ಕಹಳೆ ನ್ಯೂಸ್

ಮುಂಬೈ: ಬ್ಯಾಂಕ್​ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು  ತಮ್ಮ ಸಂಸ್ಥೆಯ ಆದಾಯ ಹೆಚ್ಚಿಸಲು ದಂಡ ಬಡ್ಡಿ ಹಾಕುವುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಕಳವಳ ವ್ಯಕ್ತಪಡಿಸಿದೆ. ಅಲ್ಲದೇ ದಂಡ ಬಡ್ಡಿಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಸಾಲ ಮರುಪಾವತಿಗೆ ವಿಫಲರಾದರೆ ದಂಡ ಬಡ್ಡಿಗೆ ಬದಲಾಗಿ ತರ್ಕಬದ್ಧವಾದ ದಂಡ ಶುಲ್ಕವನ್ನು ಮಾತ್ರ ಹೇರಬಹುದು. ದಂಡ ಬಡ್ಡಿ ಹೇರಿಕೆ ಮೇಲಿನ ನಿಷೇಧ 2024ರ ಜನವರಿ 1ರಿಂದ ಜಾರಿಗೆ ಬರಲಿದೆ ಎಂದು ಆರ್​ಬಿಐ ಶುಕ್ರವಾರ ಹೊರಡಿಸಿದ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಲಗಾರ ತಾನು ಸಾಲ ಪಡೆದುಕೊಳ್ಳುವ ಸಂದರ್ಭ ಮಾಡಿಕೊಂಡ ಕರಾರಿನಂತೆ ಕಂತು ಪಾವತಿಸಲು ವಿಫಲನಾದರೆ ಮತ್ತು ಅವರಿಗೆ ದಂಡ ವಿಧಿಸಿದರೆ ಅದನ್ನು ದಂಡ ಶುಲ್ಕ ಎಂದು ಪರಿಗಣಿಸಬೇಕು. ಸಾಲದ ಬಡ್ಡಿಗೆ ಸೇರಿಸುವ ದಂಡವನ್ನು ಬಡ್ಡಿ ರೂಪದಲ್ಲಿ ಹೇರಬಾರದು ಎಂದು ಕೇಂದ್ರೀಯ ಬ್ಯಾಂಕ್ ಸ್ಪಷ್ಟ ಸೂಚನೆ ನೀಡಿದೆ.
ಸಾಲ ಮರುಪಾವತಿ ಮಾಡಲು ವಿಫಲರಾದವರಿಗೆ ವಿಧಿಸುವ ದಂಡ ಶುಲ್ಕ ಕೂಡ ತರ್ಕಬದ್ಧವಾಗಿರಬೇಕು. ಇದು ನಿಯಮ ಪಾಲನೆ ವೈಫಲ್ಯದ ಪ್ರಮಾಣ ಆಧರಿಸಿರಬೇಕು. ಯಾವುದೇ ತಾರತಮ್ಯ ಮಾಡಬಾರದು. ದಂಡ ಶುಲ್ಕಗಳ ಮೇಲೆ ಮತ್ತೆ ಬಡ್ಡಿಯನ್ನು ಲೆಕ್ಕ ಹಾಕಬಾರದು ಎಂದೂ ಸೂಚಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಾವುದಕ್ಕೆ ಅನ್ವಯಿಸದು?:

ಈ ಸೂಚನೆಗಳು ಕ್ರೆಡಿಟ್ ಕಾರ್ಡ್​ಗಳು, ಬಾಹ್ಯವಾಣಿಜ್ಯ ಸಾಲಗಳು, ಟ್ರೇಡ್ ಕ್ರೆಡಿಟ್​ಗಳಿಗೆ ಅನ್ವಯವಾಗುವುದಿಲ್ಲ ಎಂದು ಆರ್​ಬಿಐ ಸ್ಪಷ್ಟಪಡಿಸಿದೆ.

ದಂಡದ ಬಡ್ಡಿ ಎಂದರೇನು?

ಮರುಪಾವತಿಯ ನಿಯಮಗಳ ಪ್ರಕಾರ ಕಂತುಗಳನ್ನು ಸಾಲಗಾರರು ನಿರ್ದಿಷ್ಟ ಅವಧಿಯೊಳಗೆ ಕಟ್ಟದೇ ಹೋದರೇ, ಸಾಲಗಾರನಿಗೆ ವಿಳಂಬವಾದ ಕಂತುಗಳ ಮೇಲೆ ಬಡ್ಡಿಯನ್ನು ವಿಧಿಸಲಾಗುತ್ತದೆ. ಇದನ್ನು ದಂಡದ ಬಡ್ಡಿ ಅಥವಾ ಪ್ಯಾನೆಲ್‌ ಇಂಟರೆಸ್ಟ್‌ ಎಂದು ಕರೆಯಲಾಗುತ್ತದೆ. ತಡವಾದ ಕಂತು ಪಾವತಿಗೆ ದೊಡ್ಡ ಪ್ರಮಾಣದ ‘ದಂಡ’ವನ್ನು ನಾನಾ ಹೆಸರುಗಳಲ್ಲಿ ಬ್ಯಾಂಕ್‌ಗಳು ವಿಧಿಸುತ್ತವೆ. ಚಕ್ರಬಡ್ಡಿಯನ್ನೂ ವಿಧಿಸುತ್ತವೆ.

ನಿಗದಿತ ದರದ ಆಯ್ಕೆ:

ಸಮಾನ ಮಾಸಿಕ ಕಂತು (ಇಎಂಐ) ಮೂಲಕ ಸಾಲ ಮರುಪಾವತಿ ಮಾಡುವ ವೈಯಕ್ತಿಕ ಸಾಲಗಾರರಿಗೆ ನಿಗದಿತ (ಫಿಕ್ಸೆಡ್) ಬಡ್ಡಿ ದರ ವ್ಯವಸ್ಥೆ ಅಥವಾ ಸಾಲದ ಅವಧಿ ವಿಸ್ತರಿಸುವ ಆಯ್ಕೆಯನ್ನು ಒದಗಿಸುವಂತೆ ಬ್ಯಾಂಕ್​ಗಳಿಗೆ ನಿರ್ದೇಶನ ನೀಡಿದೆ. ಬಡ್ಡಿ ದರದ ಏರಿಕೆ ಸಂದರ್ಭದಲ್ಲಿ ಸಾಲಗಾರರು ಋಣಾತ್ಮಕ (ನೆಗೆಟಿವ್) ಅಮಾರ್ಟೆಸೇಶನ್ ಜಾಲಕ್ಕೆ ಬೀಳುವುದನ್ನು ತಪ್ಪಿಸುವುದು ಈ ಕ್ರಮದ ಉದ್ದೇಶವಾಗಿದೆ.

ಆರ್‌ಬಿಐ ಹೊಸ ಮಾರ್ಗಸೂಚಿಯಲ್ಲಿ ಏನಿದೆ?

ಕ್ರೆಡಿಟ್‌ ಕಾರ್ಡ್‌ಗಳು, ಬಾಹ್ಯ ವಾಣಿಜ್ಯ ಸಾಲಗಳು, ಟ್ರೇಡ್‌ ಕ್ರೆಡಿಟ್ಸ್‌ಗಳನ್ನು ಹೊರತುಪಡಿಸಿ, ಉಳಿದ ಸಾಲಗಳಿಗೆ ಸಂಬಂಧಿಸಿದಂತೆ ಆರ್‌ಬಿಐ ಮಹತ್ವದ ಸೂಚನೆಗಳನ್ನು ನೀಡಿದೆ. ಮುಖ್ಯ ಸೂಚನೆಗಳು ಹೀಗಿವೆ;

ಕಂತು ಪಾವತಿಯಲ್ಲಿ ಬ್ಯಾಂಕ್‌ ನಿಯಮ ಉಲ್ಲಂಘಿಸಿದ ಸಾಲದ ಖಾತೆಗಳ ಮೇಲೆ ಯಾವುದೇ ಬಡ್ಡಿಯನ್ನು ವಿಧಿಸಬಾರದು. ದಂಡದ ಶುಲ್ಕವನ್ನು ವಿಧಿಸಿದರೆ, ಈ ಶುಲ್ಕಗಳ ಮೇಲೆ ಹೆಚ್ಚಿನ ಬಡ್ಡಿಯನ್ನು ಲೆಕ್ಕ ಹಾಕಬಾರದು. ಅಂದರೆ, ಚಕ್ರಬಡ್ಡಿಗೆ ಅವಕಾಶವಿಲ್ಲ.
ವಿಧಿಸಲಾದ ಬಡ್ಡಿಯ ಮೇಲೆ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಹಾಕಲು ಅವಕಾಶವಿಲ್ಲ.

ದಂಡದ ಶುಲ್ಕಗಳು ಸಮಂಜಸವಾಗಿರಬೇಕು ಮತ್ತು ಅನುಸರಣೆಗೆ ಅನುಗುಣವಾಗಿರಬೇಕು. ಯಾವುದೇ ನಿರ್ದಿಷ್ಟ ಸಾಲದ ಬಡ್ಡಿಗಿಂತಲೂ ಹೆಚ್ಚಿನದಾಗಿರಬಾರದು. ವೈಯಕ್ತಿಕ ಸಾಲಗಾರರಿಗೆ ಮಂಜೂರಾದ ಸಾಲಗಳ ಸಂದರ್ಭದಲ್ಲಿ ದಂಡದ ಶುಲ್ಕಗಳು, ಇತರ ಸಾಲಗಾರರಿಗೆ ವಿಧಿಸುವುದಕ್ಕಿಂತ ಹೆಚ್ಚಿರಬಾರದು. ದಂಡದ ಆರೋಪಗಳ ಪ್ರಮಾಣ ಮತ್ತು ಕಾರಣಗಳನ್ನು ಬ್ಯಾಂಕ್‌ಗಳು ಸ್ಪಷ್ಟವಾಗಿ ಬಹಿರಂಗಪಡಿಸಬೇಕು.