Tuesday, January 21, 2025
ಸುದ್ದಿ

ವಿದೇಶಿ ನೆಲದಲ್ಲಿ ಹ್ಯಾಕರ್ ಸುಳಿಗೆ ಬಿದ್ದು ಜೈಲು ಪಾಲಾದ ಕಡಬದ ಚಂದ್ರಶೇಖರ್ : ಯುವಕನ್ನ ಬಿಡಿಸಲು ನಳೀನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಶತಪ್ರಯತ್ನ –ಕಹಳೆ ನ್ಯೂಸ್

ದಕ್ಷಿಣ ಕನ್ನಡದ ಯುವಕನ ಹೆಸರಿನಲ್ಲಿ ಹ್ಯಾಕರ್‌ಗಳು ನಕಲಿ ಬ್ಯಾಂಕ್ ತೆರೆದು ಅಕ್ರಮ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಇದೀಗ ಕಡಬದ ಚಂದ್ರಶೇಖರ, ರಿಯಾದ್ ಜೈಲು ಪಾಲಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈಗ ಅದೇ ರೀತಿಯ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಇದರಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು ಅಕ್ರಮ ಹಣ ವ್ಯವಹಾರ ಮಾಡಲಾಗಿದೆ. ಇದರಿಂದ ಈಗ ಜಿಲ್ಲೆಯ ಕಡಬದ ಐತೂರು ಗ್ರಾಮದ ಚಂದ್ರಶೇಖರ ಎಂ.ಕೆ. ಎಂಬ ಯುವಕ ರಿಯಾದ್‌ನಲ್ಲಿ ಜೈಲು ಪಾಲಾಗಿದ್ದಾನೆ.

ಈ ಬಗ್ಗೆ ಮಾಹಿತಿ ನೀಡಿರುವ ಚಂದ್ರಶೇಖರ್ ಅವರ ಸಹೋದರಿ ಪುನೀತ, “ಕಡಬ ಅಲ್ಫಾನರ್ ಸೆರಾಮಿಕ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಚಂದ್ರಶೇಖರ್ ಹ್ಯಾಕರ್‌ಗಳ ಸಂಚಿನ ಸುಳಿಗೆ ಬಲಿಯಾಗಿ, 2022ರ ನವೆಂಬರ್‌ನಿoದ ರಿಯಾದ್‌ನ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಕಳೆದ ವರ್ಷ ಮೊಬೈಲ್ ಹಾಗೂ ಸಿಮ್ ಖರೀದಿಗೆ ರಿಯಾದ್‌ನ ಅಂಗಡಿಗೆ ಹೋಗಿದ್ದಾರೆ. ಅಲ್ಲಿ ಎರಡು ಬಾರಿ ಅವರ ತಂಬ್ ಪಡೆಯಲಾಗಿತ್ತು. ವಾರದ ಬಳಿಕ ಅವರಿಗೆ ಅರೇಬಿಕ್ ಭಾಷೆಯಲ್ಲೊಂದು ಸಂದೇಶ ಬಂದಿದೆ. ಅದನ್ನು ಕ್ಲಿಕ್ ಮಾಡಿದ್ದು, ಎರಡು ದಿನಗಳ ಬಳಿಕ ದೂರವಾಣಿ ಕರೆ ಬಂದಿದೆ. ಸಿಮ್ ಮಾಹಿತಿ ಕೇಳಿ ಒಟಿಪಿ ಸಂಖ್ಯೆ ಪಡೆದಿದ್ದಾರೆ. ಆದರೆ, ವಾರದ ಬಳಿಕ ಏನೂ ಮಾಹಿತಿ ನೀಡದೆ ಅವರನ್ನು ರಿಯಾದ್ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ನಮಗೆ ರಿಯಾದ್‌ನಲ್ಲಿರುವ ಕೊಡಗು ಮೂಲದ ಅರುಣ್ ಎಂಬವರು ವಿಚಾರ ತಿಳಿಸಿದ್ದಾರೆ” ಎಂದರು.

ಆ ಬಳಿಕ ಚಂದ್ರಶೇಖರ್‌ಗೆ ತಿಳಿಯದೆ ರಿಯಾದ್‌ನಲ್ಲಿ ಬ್ಯಾಂಕ್ ಖಾತೆ ತೆರೆದಿರುವುದು ಗೊತ್ತಾಗಿದೆ. ಖಾತೆಗೆ ರಿಯಾದ್‌ನ ಮಹಿಳೆಯೊಬ್ಬರಿಂದ 22 ಸಾವಿರ ರಿಯಲ್ ಹಣ ಜಮೆಯಾಗಿದ್ದು, ಅದು ಇನ್ನಾವುದೋ ದೇಶಕ್ಕೆ ವರ್ಗಾವಣೆಯಾಗಿದೆ. ಆಕೆ ನೀಡಿರುವ ದೂರಿನಂತೆ ಚಂದ್ರಶೇಖರ್ ಅವರನ್ನು ಬಂಧಿಸಲಾಗಿದೆ. ಜೈಲುಪಾಲಾದ ಚಂದ್ರಶೇಖರ್ ಬಿಡುಗಡೆಗೆ ರಿಯಾದ್ ವಕೀಲರ ಮೂಲಕ ಪ್ರಯತ್ನಪಟ್ಟರೂ 10 ಲಕ್ಷ ರೂ. ಖರ್ಚಾಗಿದೆಯೇ ವಿನಃ ಬೇರಾವುದೇ ಫಲಿತಾಂಶ ದೊರಕಿಲ್ಲ ಎಂದು ಅವರು ಹೇಳಿದ್ದಾರೆ.

ನಾವೀಗ ಶೋಭಾ ಕರಂದ್ಲಾಜೆಯವರ ಮೂಲಕ ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಸಂಪರ್ಕಿಸಿ ಬಿಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಚಂದ್ರಶೇಖರ್ 22 ಸಾವಿರ ರಿಯಲ್ ಹಣವನ್ನು ರಿಯಾದ್‌ನ ಮಹಿಳೆಗೆ ನೀಡಬೇಕು ಮತ್ತು ಎರಡು ವರ್ಷಗಳ ಜೈಲುಶಿಕ್ಷೆ ಅನುಭವಿಸಬೇಕೆಂದು ಅಲ್ಲಿನ ನ್ಯಾಯಾಲಯ ಸೂಚಿಸಿದೆ. ಜನವರಿಯಲ್ಲಿ ಮದುವೆಯಾಗಬೇಕಿದ್ದ ಚಂದ್ರಶೇಖರ್ ಜೈಲಿನಲ್ಲಿದ್ದಾರೆ ಎಂದರು.

ಚoದ್ರಶೇಖರ್ ರಿಯಾದ್‌ಗೆ ಹೋಗಿ ನಾಲ್ಕು ವರ್ಷ ಆಯಿತು. ಮೂರು ಬಾರಿ ಊರಿಗೆ ಬಂದಿದ್ದರು. 2022 ಏಪ್ರಿಲ್‌ನಲ್ಲಿ ಊರಿಗೆ ಬಂದಿದ್ದರು. ಅವರನ್ನು ಅರೆಸ್ಟ್ ಮಾಡಿದ ಬಳಿಕ ಅವರಿಗೆ ಕೆಲಸ ನೀಡಿದ ಕಂಪನಿ ಯಾವುದೇ ಸ್ಪಂದನೆ ನೀಡುತ್ತಿಲ್ಲ. ನಮ್ಮ ಗಮನಕ್ಕೆ ಬಂದ ಬಳಿಕ ವಿದೇಶಾಂಗ ಸಚಿವಾಲಯದ ಮೂಲಕ ಕರೆತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಈ ಹಿಂದೆ 2021ರಲ್ಲಿ ಮಂಗಳೂರಿನ ಬಿಕರ್ನಕಟ್ಟೆ ಮೂಲದ ಶೈಲೇಶ್ ಕುಮಾರ್ ಎಂಬವರ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಿ, ಅದರಲ್ಲಿ ಸೌದಿ ರಾಜನ ಬಗ್ಗೆ ಅವಹೇಳನಕಾರಿ ಕಮೆಂಟ್ ಬರೆದ ಪರಿಣಾಮ ಆತ ಸೌದಿ ಜೈಲಿನಲ್ಲಿ ಬಂಧಿಯಾಗಿದ್ದ.

ಈಗ ಚಂದ್ರಶೇಖರ್ ಪ್ರಕರಣವೂ ಶೈಲೇಶ್ ಕುಮಾರ್‌ನ ರೀತಿಯೇ ಆಗಿದೆ. ಇಬ್ಬರಿಗೂ ಅವರಿಗೆ ಅರಿವಿಲ್ಲದೇ ವಂಚನೆ ಮಾಡಲಾಗಿದೆ. ಸದ್ಯ ಫೇಸ್‌ಬುಕ್ ಖಾತೆ ಹ್ಯಾಕ್ ಮಾಡಿದ ಪ್ರಕರಣ ಸಂಬoಧಿಸಿದoತೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, “ಫೇಸ್‌ಬುಕ್ ಒಂದು ವಾರದೊಳಗೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಭಾರತೀಯ ಪ್ರಜೆಯು ಸುಳ್ಳು ಪ್ರಕರಣದಲ್ಲಿ ವಿದೇಶಿ ನೆಲದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಆತನ ಬಿಡುಗಡೆಗೆ ಯಾವೆಲ್ಲ ಕ್ರಮ ಕೈಗೊಂಡಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಬೇಕು” ಎಂದು ನಿರ್ದೇಶನ ನೀಡಿದೆ.

ವಿದೇಶಾಂಗ ಸಚಿವರಿಗೆ ಸಂಸದರ ಪತ್ರ: ಈ ವಿಚಾರದಲ್ಲಿ ವಿದೇಶಾಂಗ ಸಚಿವ ಡಾ. ಸುಬ್ರಹ್ಮಣ್ಯಂ ಜೈಶಂಕರ್ ಅವರಿಗೆ ಪತ್ರ ಬರೆದಿರುವ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಚಂದ್ರಶೇಖರ್ ಬಿಡುಗಡೆಗೆ ಪ್ರಯತ್ನಿಸುವಂತೆ ಮನವಿ ಮಾಡಿ ಪತ್ರ ಬರೆದಿದ್ದಾರೆ.