ಸುಪ್ರಸಿದ್ಧ ಹಾಸನಾಂಬಾ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಿ ! ಹಿಂದೂ ಜನಜಾಗೃತಿ ಸಮಿತಿಯಿಂದ ಹಾಸನದ ಜಿಲ್ಲಾಧಿಕಾರಿಗಳಿಗೆ ಮನವಿ – ಕಹಳೆ ನ್ಯೂಸ್
ಹಾಸನ : ಜಿಲ್ಲೆಯ ಹಾಸನಾಂಬಾ ದೇವಸ್ಥಾನವು 12 ನೇ ಶತಮಾನದ ಅತ್ಯಂತ ಪ್ರಾಚೀನ ಶಕ್ತಿಪೀಠವಾಗಿದೆ. ಭಗವಾನ್ ಶಿವನ ಅವತಾರಿ ಸಪ್ತಮಾತೃಕೆಯರಾದ ವೈಷ್ಣವಿ, ಮಾಹೇಶ್ವರಿ ಮತ್ತು ಕೌಮಾರಿ ದೇವಿಗಳ ವಾಸಸ್ಥಾನವಾಗಿದೆ. ಈ ಪವಿತ್ರ ಶ್ರೀ ದೇವಿಯರ ಕ್ಷೇತ್ರಕ್ಕೆ ಜಗತ್ತಿನಾದ್ಯಂತ ಭಕ್ತಾಧಿಗಳು ಬರುತ್ತಾರೆ. ವರ್ಷಕ್ಕೊಮ್ಮೆ ದೀಪಾವಳಿಯ ಸಮಯದಲ್ಲಿ ಲಕ್ಷಾಂತರ ಭಕ್ತರು ದೇವಿಯರ ದರ್ಶನ ಪಡೆಯುತ್ತಾರೆ. ಸನಾತನ ಹಿಂದೂ ಧರ್ಮದ ಸಂಸ್ಕೃತಿಯ ಪ್ರಕಾರ ದೇವರ ದರ್ಶನವನ್ನು ಪಡೆಯುವಾಗ ಭಾರತೀಯ ಸಂಸ್ಕೃತಿಯ ಉಡುಪುಗಳನ್ನು ಧರಿಸಬೇಕೆಂಬ ನಿಯಮವಿದೆ. ಅದರಿಂದ ಭಕ್ತರಿಗೆ ದೇವಿಯ ಚೈತನ್ಯದ ಲಾಭವಾಗುತ್ತದೆ ಮತ್ತು ದೇವತೆಯ ತತ್ತ್ವದ ಅನೂಭೂತಿ ಬರುತ್ತದೆ. ಸ್ತ್ರೀಯರು ಸೀರೆ, ಭಾರತೀಯ ಉಡುಪುಗಳನ್ನು ಧರಿಸುವುದು, ಅದೇ ರೀತಿಯಲ್ಲಿ ಪುರುಷರು ಸಾತ್ತ್ವಿಕ ಉಡುಪು ಧರಿಸಿ ದೇವತೆಗಳ ದರ್ಶನ ಪಡೆದರೆ, ಅವರಲ್ಲಿ ದೇವತೆಗಳ ಚೈತನ್ಯವನ್ನು ಗ್ರಹಿಸಲು ಸಹಜಸಾಧ್ಯವಾಗುತ್ತದೆ ಮತ್ತು ಅವರಲ್ಲಿ ಶಕ್ತಿತತ್ತ್ವವು ಜಾಗೃತವಾಗುತ್ತದೆ. ಆದ್ದರಿಂದ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿ ಮಾಡಬೇಕು ಮತ್ತು ಹಣೆಗೆ ಕುಂಕಮ ಹಚ್ಚಲು ಕುಂಕುಮದ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ 19 ಆಗಸ್ಟ್ ಶನಿವಾರದಂದು ಹಾಸನದ ಜಿಲ್ಲಾಧಿಕಾರಿಗಳಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸುಜಾತ ನವೀನ, ಭಾರತೀಯ ವೈದ್ಯಕೀಯ ಸಂಘ, ಹಾಸನದ ಮಾಜಿ ಅಧ್ಯಕ್ಷರಾದ ಡಾ. ಎನ್ ರಮೇಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
HasanambaTemple_Dresscode_PN (1)
ಇಂದು ಜನರು ಆಧುನಿಕ ಜಗತ್ತಿಗೆ ಮಾರು ಹೋಗಿ, ದೇವರ ದರ್ಶನ ಪಡೆಯುವಾಗ ಪಾಶ್ಚಾತ್ಯ ಅಸಾತ್ತ್ವಿಕ ಉಡುಪು, ಕೂದಲು ಹರಡಿಕೊಳ್ಳುವುದು, ಅಸಭ್ಯ ವರ್ತನೆ, ಮುಂತಾದ ವಿದೇಶಿ ರೀತಿಯಲ್ಲಿ ಸಂಸ್ಕೃತಿಶೂನ್ಯ ರಜ-ತಮ ಪ್ರಧಾನ ಉಡುಪುಗಳ ಧಾರಣೆ ಮತ್ತು ದೇವಸ್ಥಾನಗಳ ಒಳಗೆ ಮೊಬೈಲ್‌ಗಳ ಬಳಕೆ, ಮುಂತಾದ ಧರ್ಮಹಾನಿ ಕೃತಿಗಳಿಂದ ದೇವಸ್ಥಾನದ ಸಾತ್ತ್ವಿಕತೆ, ಪಾವಿತ್ರ‍್ಯತೆಗೆ ಭಂಗ ಉಂಟಾಗುತ್ತಿದೆ. ಜೊತೆಗೆ ನಿಜವಾದ ಭಾವಿಕ ಭಕ್ತರು ದೈವಿ ಚೈತನ್ಯದ ಪೂರ್ಣ ಲಾಭ ಪಡೆಯುವುದರಿಂದ ವಂಚಿತರಾಗುತ್ತಾರೆ. ದೇವಸ್ಥಾನಗಳ ಪಾವಿತ್ರ‍್ಯವನ್ನು ಕಾಪಾಡಲು ಇಂದು ರಾಜ್ಯದ ಅನೇಕ ದೇವಸ್ಥಾನಗಳಲ್ಲಿ ಸಹ ವಸ್ತ್ರಸಂಹಿತೆ ಅಳವಡಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ರಾಜ್ಯ ಧಾರ್ಮಿಕ ಪರಿಷತ್ ಸಹ ರಾಜ್ಯದ 211 ಎ ಗ್ರೇಡ್ ದೇವಸ್ಥಾನಗಳಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆಯನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆಸಿದೆ. ಈಗಾಗಲೇ ಚಿಕ್ಕಮಗಳೂರಿನ ಇತಿಹಾಸ ಪ್ರಸಿದ್ದ ದೇವಿರಮ್ಮನ ದೇಗುಲದಲ್ಲಿ ಆಡಳಿತ ಮಂಡಳಿ ವಸ್ತ್ರಸಂಹಿತೆ ಜಾರಿ ಮಾಡಿದೆ. ಅದೇ ರೀತಿಯಲ್ಲಿ ಹಾಸನಾಂಬಾ ದೇವಸ್ಥಾನದಲ್ಲಿ ಸಹ ವಸ್ತ್ರಸಂಹಿತೆ ಜಾರಿ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.