ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಜೂನ್‌ನಿಂದ ಆಗಸ್ಟ್ ತಿಂಗಳವರೆಗೆ 432 ಮಿ.ಮೀ ಮಳೆಯಾಗಬೇಕಿತ್ತು. ಆದರೆ 386 ಮಿ.ಮೀ ಮಾತ್ರ ಮಳೆ ಬಿದ್ದಿದೆ. ಮಳೆರಾಯನ ಕಣ್ಣಾಮುಚ್ಚಾಲೆ ಆಟ ಅನ್ನದಾತನ ನಿದ್ದೆಗೆಡಿಸಿದೆ.
ಒಂದೆಡೆ ಮಳೆ ಆಗುತ್ತಿಲ್ಲ. ಮತ್ತೊಂದೆಡೆ, ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲ. ಇದರಿಂದಾಗಿ ಸಾಲ ಮಾಡಿ ಭತ್ತ ಬೆಳೆದ ರೈತರನ್ನು ಬೆಳೆಹಾನಿ ಭೀತಿ ಕಾಡುತ್ತಿದೆ. ಮಳೆ ಸುರಿಸದ ಮಳೆರಾಯನ ವಿರುದ್ಧ ಕೋಪಗೊಂಡಿರುವ ರೈತರು ಲೋಡ್ ಶೆಡ್ಡಿಂಗ್ ಮಾಡುತ್ತಿರುವ ಸರ್ಕಾರದ ವಿರುದ್ಧವೂ ಹಿಡಿಶಾಪ ಹಾಕುತ್ತಿದ್ದಾರೆ.
ನೀರಿಲ್ಲದೇ ಭತ್ತದ ಗದ್ದೆ ಬಿರುಕು ಬಿಡುತ್ತಿದೆ. ಒಣಗುವ ಸ್ಥಿತಿ ತಲುಪಿವೆ ನಾಟಿ ಮಾಡಿರುವ ಭತ್ತದ ಸಸಿಗಳು. ಮಳೆಗಾಗಿ ಆಕಾಶದತ್ತ ಮುಖಮಾಡಿ ಅನ್ನದಾತ ಕುಳಿತಿದ್ದಾನೆ. ಇಂಥ ದೃಶ್ಯಗಳು ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಅಪ್ಪಯ್ಯ ದೇಸಾಯಿ ಎಂಬವರ ಹೊಲದಲ್ಲಿ ಕಂಡುಬoತು.
ಕಡೋಲಿ ಗ್ರಾಮದ 2,400 ಎಕರೆ ಪ್ರದೇಶದ ಪೈಕಿ ಅಂದಾಜು 1,500 ಎಕರೆ ಭೂಮಿಯಲ್ಲಿ ಭತ್ತ ಬೆಳೆಯಲಾಗಿದೆ. ಇದರಲ್ಲಿ 1 ಸಾವಿರ ಎಕರೆ ಭೂಮಿಯಲ್ಲಿ ಮಳೆ ಕೊರತೆಯಿಂದಾಗಿ ಗದ್ದೆಗಳು ಬಿರುಕು ಬಿಟ್ಟಿವೆ. 20 ದಿನಗಳ ಹಿಂದೆ ನಾಟಿ ಮಾಡಿದ್ದ ಭತ್ತದ ಸಸಿಗಳು ಭೂಮಿಯಿಂದ ಆರು ಇಂಚು ಮೇಲೆ ಬಂದಿವೆ. ಈಗ ನೀರಿಗಾಗಿ ಅವು ಬಾಯಿ ಬಿಡುವಂತಾಗಿದೆ.
ಬೋರ್‌ವೆಲ್ ಮತ್ತು ಬಾವಿ ಇದ್ದವರು ನೀರು ಹಾಯಿಸಿ ಬೆಳೆ ಬದುಕಿಸಬೇಕೆಂದರೂ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ಮಳೆಗಾಗಿ ಕೆಲವು ರೈತರು ಆಕಾಶದತ್ತ ಪ್ರಾರ್ಥಿಸುತ್ತಾ ಕುಳಿತರೆ, ಮತ್ತೊಂದಿಷ್ಟು ರೈತರು ಸರಿಯಾಗಿ ವಿದ್ಯುತ್ ನೀಡುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.